ಪ್ಯಾರಿಸ್ ಒಲಿಂಪಿಕ್ಸ್: ಪದಕದ ಭರವಸೆ ಮೂಡಿಸಿರುವ ಭಾರತದ ಅಗ್ರ-10 ಅತ್ಲೀಟ್‌ಗಳು
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್-2024 ಆರಂಭಕ್ಕೆ ಬೆರಳೆಣಿಕೆಯ ದಿನ ಬಾಕಿ ಇದ್ದು ಈ ಬಾರಿಯ ಕ್ರೀಡಾಕೂಟವು ಜುಲೈ 26ರಿಂದ ಆಗಸ್ಟ್ 11ರ ತನಕ ನಡೆಯಲಿದೆ. ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕ ಸಹಿತ ಒಟ್ಟು 7 ಪದಕಗಳನ್ನು ಗೆದ್ದಿದ್ದ ಭಾರತೀಯ ಅತ್ಲೀಟ್‌ಗಳು ಒಲಿಂಪಿಕ್ಸ್ ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದ್ದರು.
ಈ ಬಾರಿ ಪ್ಯಾರಿಸ್‌ನಲ್ಲಿ ಪದಕ ಗೆಲ್ಲುವ ಕುರಿತು ಭಾರೀ ಭರವಸೆ ಮೂಡಿಸಿರುವ ಪ್ರಮುಖ 10 ಕ್ರೀಡಾಪಟುಗಳತ್ತ ಒಂದು ನೋಟ ಇಲ್ಲಿದೆ.
PC : olympics.com
ನೀರಜ್ ಚೋಪ್ರಾ (ಪುರುಷರ ಜಾವೆಲಿನ್ ಎಸೆತ):
ನೀರಜ್ ಚೋಪ್ರಾ 2020ರಲ್ಲಿ ಟೋಕಿಯೊದಲ್ಲಿ ಜಯಿಸಿದ್ದ ಒಲಿಂಪಿಕ್ಸ್ ಚಿನ್ನದ ಪದಕವನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ಚಿತ್ತಹರಿಸಿದ್ದಾರೆ. ಜಪಾನ್ ರಾಜಧಾನಿಯಲ್ಲಿ 87.58 ಮೀ.ದೂರಕ್ಕೆ ಜಾವೆಲಿನ್ ಎಸೆದು ಅಗ್ರ ಸ್ಥಾನ ಪಡೆದಿದ್ದರು. ಬೇಸಿಗೆ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಅತ್ಲೀಟ್ ಎನಿಸಿಕೊಂಡು ಇತಿಹಾಸ ನಿರ್ಮಿಸಿದ್ದರು. ಶೂಟರ್ ಅಭಿನವ್ ಬಿಂದ್ರಾ ನಂತರ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ 2ನೇ ಕ್ರೀಡಾಪಟುವಾಗಿದ್ದಾರೆ.
ಆ ನಂತರ ಚೋಪ್ರಾ ಅವರು ವಿಶ್ವ ಹಾಗೂ ಡೈಮಂಡ್ ಲೀಗ್‌ನಲ್ಲಿ ಚಾಂಪಿಯನ್ ಆಗಿದ್ದರು. ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ತನ್ನಲ್ಲೇ ಉಳಿಸಿಕೊಂಡಿದ್ದರು. ಈ ವರ್ಷ ದೋಹಾದಲ್ಲಿ 88.36 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದರು.
PC : PTI
ನಿಖಾತ್ ಝರೀನಾ (ಬಾಕ್ಸಿಂಗ್-ಮಹಿಳೆಯರ 50 ಕೆಜಿ):
ಬಾಕ್ಸರ್ ನಿಖಾತ್ ಝರೀನಾ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಹಾಲಿ ವಿಶ್ವ ಹಾಗೂ ಕಾಮನ್‌ವೆಲ್ತ್ ಚಾಂಪಿಯನ್ ಆಗಿದ್ದಾರೆ. ಕಳೆದ ವರ್ಷ ಏಶ್ಯನ್ ಗೇಮ್ಸ್ ನಲ್ಲಿ ಪಾದಾರ್ಪಣೆಗೈದಿದ್ದ ಝರೀನಾ ಕಂಚಿನ ಪದಕ ಜಯಿಸಿದ್ದರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು.
PC : olympics.com
ಲವ್ಲೀನಾ ಬೊರ್ಗೊಹೈನ್ (ಬಾಕ್ಸಿಂಗ್-ಮಹಿಳೆಯರ 75 ಕೆಜಿ):
ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ಚೊಚ್ಚಲ ಒಲಿಂಪಿಕ್ಸ್ ಆಡಿದ್ದ ಲವ್ಲೀನಾ ಬೊರ್ಗೊಹೈನ್ ಮಹಿಳೆಯರ 64-68 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ವಿಜೇಂದರ್ ಸಿಂಗ್ ಹಾಗೂ ಮೇರಿ ಕೋಮ್ ನಂತರ ಒಲಿಂಪಿಕ್ಸ್ ನಲ್ಲಿ ಪದಕ ಜಯಿಸಿದ ಭಾರತದ 3ನೇ ಬಾಕ್ಸರ್ ಎನಿಸಿಕೊಂಡಿದ್ದರು. ಲವ್ಲೀನಾ 2023ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ಐಬಿಎ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಕಳೆದ ವರ್ಷ ಏಶ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಲವ್ಲೀನಾ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅರ್ಹತೆ ಪಡೆದಿದ್ದರು. ಝೆಕ್ ಗಣರಾಜ್ಯ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ಭಾಗವಹಿಸಿರುವ ಲವ್ಲೀನಾ, ಪ್ಯಾರಿಸ್‌ನಲ್ಲಿ ಪದಕ ಗೆಲ್ಲಬಲ್ಲ ನೆಚ್ಚಿನ ಬಾಕ್ಸರ್ ಆಗಿದ್ದಾರೆ.
PC : PTI
ಸಾತ್ವಿಕ್ ಸಾಯಿರಾಜ್- ಚಿರಾಗ್ ಶೆಟ್ಟಿ (ಬ್ಯಾಡ್ಮಿಂಟನ್-ಪುರುಷರ ಡಬಲ್ಸ್):
ಇತ್ತೀಚೆಗೆ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಮಹತ್ವದ ಸಾಧನೆಗೆ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಪ್ರಮುಖ ಕಾರಣರಾಗಿದ್ದಾರೆ. ಈ ಜೋಡಿ ಭಾರತವು 2022ರಲ್ಲಿ ಥಾಮಸ್ ಕಪ್ ಜಯಿಸಿ ಇತಿಹಾಸ ನಿರ್ಮಿಸಲು ಪ್ರಮುಖ ಕೊಡುಗೆ ನೀಡಿತ್ತು.ಬಿಡಬ್ಲುಎಫ್ ವರ್ಲ್ಡ್ ಟೂರ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಸಾತ್ವಿಕ್-ಚಿರಾಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು, ಏಶ್ಯನ್ ಗೇಮ್ಸ್ ನಲ್ಲಿ ಚಿನ್ನ, ಏಶ್ಯನ್ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿ ವಿಶ್ವದ ನಂ.1 ರ್ಯಾಂಕಿಂಗ್‌ಗೂ ಏರಿದ್ದಾರೆ.
PC : PTI
ಪಿ.ವಿ. ಸಿಂಧು (ಬ್ಯಾಡ್ಮಿಂಟನ್-ಮಹಿಳೆಯರ ಸಿಂಗಲ್ಸ್):
ಭಾರತವು ಬ್ಯಾಡ್ಮಿಂಟನ್‌ನಲ್ಲಿ ಗೆದ್ದಿರುವ 3 ಒಲಿಂಪಿಕ್ಸ್ ಪದಕಗಳ ಪೈಕಿ ಎರಡನ್ನು ಪಿ.ವಿ.ಸಿಂಧು ಗೆದ್ದಿದ್ದಾರೆ. ಟೋಕಿಯೊದಲ್ಲಿ ಕಂಚಿನ ಪದಕ ಜಯಿಸುವ ಮೊದಲು 2016ರಲ್ಲಿ ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 2022ರ ಕಾಮನ್‌ವೆಲ್ತ್ ಗೇಮ್ಸ್ ವೇಳೆ ಎಡಪಾದದ ಗಾಯಕ್ಕೆ ಒಳಗಾದ ನಂತರ ಸಿಂಧು ಶ್ರೇಷ್ಠ ಫಾರ್ಮ್ನಲ್ಲಿಲ್ಲ. ಭಾರತದ ಬ್ಯಾಡ್ಮಿಂಟನ್ ಲೆಜೆಂಡ್ ಪ್ರಕಾಶ್ ಪಡುಕೋಣೆ ಅವರಿಂದ ತರಬೇತಿ ಪಡೆದಿರುವ, ಎರಡು ಒಲಿಂಪಿಕ್ಸ್ನ ಲ್ಲಿ ಶ್ರೇಷ್ಠ ನಿರ್ವಹಣೆ ತೋರಿರುವ ಸಿಂಧು ಅವರು ಪ್ಯಾರಿಸ್‌ನಲ್ಲಿ ಪದಕ ಗೆಲ್ಲಬಲ್ಲ ಗುಂಪಿನಲ್ಲಿದ್ದಾರೆ.
PC : NDTV
ಅಮಿತ್ ಪಾಂಘಾಲ್ (ಕುಸ್ತಿ-ಮಹಿಳೆಯರ 53ಕೆಜಿ):
ಅಂತಿಮ್ ಪಾಂಘಾಲ್ ಪ್ಯಾರಿಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಕೇವಲ ಇಬ್ಬರು ಕುಸ್ತಿಪಟುಗಳ ಪೈಕಿ ಒಬ್ಬರಾಗಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಅಂತಿಮ್ 53 ಕೆಜಿ ವಿಭಾಗದಲ್ಲಿ 4ನೇ ಶ್ರೇಯಾಂಕ ಪಡೆದಿದ್ದಾರೆ. ಎರಡು ಬಾರಿ ಅಂಡರ್-20 ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ. ಕಳೆದ ವರ್ಷ ಸೀನಿಯರ್ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಬೆಲ್‌ಗ್ರೆಡ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಸಾಧನೆಯೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದರು.
PC : PTI
ರೋಹನ್ ಬೋಪಣ್ಣ, ಎನ್.ಶ್ರೀರಾಮ್ ಬಾಲಾಜಿ(ಟೆನಿಸ್-ಪುರುಷರ ಡಬಲ್ಸ್):
ಪ್ಯಾರಿಸ್‌ನಲ್ಲಿ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಲಿರುವ ರೋಹನ್ ಬೋಪಣ್ಣ ಹಾಗೂ ಎನ್.ಶ್ರೀರಾಮ್ ಬಾಲಾಜಿಗೆ ಟೆನಿಸ್‌ನಲ್ಲಿ ಭಾರತಕ್ಕೆ ಎರಡನೇ ಒಲಿಂಪಿಕ್ಸ್ ಪದಕ ಗೆದ್ದುಕೊಡುವ ಉತ್ತಮ ಅವಕಾಶವಿದೆ. ಲಿಯಾಂಡರ್ ಪೇಸ್ 1996ರ ಅಟ್ಲಾಂಟ ಗೇಮ್ಸ್ ನಲ್ಲಿ ಪುರುಷರ ಸಿಂಗಲ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದರು. 44ರ ಹರೆಯದ ಬೋಪಣ್ಣ ಸದ್ಯ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಮ್ಯಾಥ್ಯೂ ಎಬ್ಡೆನ್ ಜೊತೆಗೆ ಈ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಬಾರಿ ಪುರುಷರ ಡಬಲ್ಸ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಪೇಸ್ ಹಾಗೂ ಮಹೇಶ್ ಭೂಪತಿ ನಂತರ ಡಬಲ್ಸ್ ನಲ್ಲಿ ವಿಶ್ವದ ನಂ.1 ಸ್ಥಾನಕ್ಕೇರಿದ ಭಾರತದ 3ನೇ ಟೆನಿಸ್‌ಪಟು ಆಗಿದ್ದಾರೆ. ಅಗ್ರ-10 ಆಟಗಾರನಾದ ಕಾರಣ ಬೋಪಣ್ಣ 3ನೇ ಬಾರಿ ಒಲಿಂಪಿಕ್ಸ್ ನಲ್ಲಿ ಆಡಲು ಅರ್ಹತೆ ಪಡೆದಿದ್ದಾರೆ. ಬೋಪಣ್ಣ ಹಾಗೂ ಬಾಲಾಜಿ ಇಬ್ಬರೂ ಡಬಲ್ಸ್ ಸ್ಪೆಷಲಿಷ್ಟ್ ಗಳು. ಫ್ರೆಂಚ್ ಓಪನ್ ನಡೆದಿದ್ದ ರೋಲ್ಯಾಂಡ್ ಗಾರೊಸ್‌ನಲ್ಲಿ ಒಲಿಂಪಿಕ್ಸ್ ಟೆನಿಸ್ ಸ್ಪರ್ಧೆ ನಡೆಯಲಿದೆ.
PC : olympics.com
ಮೀರಾಬಾಯಿ ಚಾನು (ವೇಟ್‌ಲಿಫ್ಟಿಂಗ್-ಮಹಿಳೆಯರ 49ಕೆಜಿ):
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಪ್ಯಾರಿಸ್‌ನಲ್ಲಿ ಮಹಿಳೆಯರ 49ಕೆಜಿ ವಿಭಾಗದಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಹಾಂಗ್‌ಝೌನಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ ನಲ್ಲಿ ಗಂಭೀರ ಗಾಯಗೊಂಡಿದ್ದ ಚಾನು, ವೀಲ್‌ಚೇರ್‌ನಲ್ಲಿ ಭಾರತಕ್ಕೆ ವಾಪಸಾಗಿದ್ದರು. ಇದೀಗ ಸ್ಪರ್ಧೆಗೆ ಮರಳಿರುವ ಚಾನು ಒಲಿಂಪಿಕ್ಸ್ ಗಾಗಿ ಕಠಿಣ ತರಬೇತಿ ನಡೆಸುತ್ತಿದ್ದಾರೆ.
PC : X
ಭಾರತೀಯ ಪುರುಷರ ಹಾಕಿ ತಂಡ:
2021ರಲ್ಲಿ ಟೋಕಿಯೊದಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಕಂಚಿನ ಪದಕ ಜಯಿಸಿತ್ತು. ಈ ಮೂಲಕ 41 ವರ್ಷಗಳ ನಂತರ ಒಲಿಂಪಿಕ್ಸ್ ಪದಕ ಗೆದ್ದಿತ್ತು. ಕಳೆದ ವರ್ಷ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದ ಭಾರತವು ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿತ್ತು. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ಗೆ ಟಿಕೆಟ್ ಪಡೆದಿತ್ತು. ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಹಾಗೂ ಮನ್‌ಪ್ರೀತ್ 4ನೇ ಒಲಿಂಪಿಕ್ಸ್ ನಲ್ಲಿ ಆಡಲಿದ್ದಾರೆ. ಐವರು ಆಟಗಾರರು ಚೊಚ್ಚಲ ಒಲಿಂಪಿಕ್ಸ್ ಆಡಲು ಸಜ್ಜಾಗಿದ್ದಾರೆ.
PC : olympics.com
ಸಿಫ್ಟ್ ಕೌರ್ ಸಮ್ರಾ(ಶೂಟಿಂಗ್-ಮಹಿಳೆಯರ 50 ಮೀ.ರೈಫಲ್ 3 ಪೊಸಿಶನ್ಸ್):
ಏಶ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 50 ಮೀ.ರೈಫಲ್ 3 ಪೊಸಿಶನ್ಸ್ನಲ್ಲಿ 469.6 ಪಾಯಿಂಟ್ಸ್ ಗಳಿಸಿ ನೂತನ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದ ಸಿಫ್ಟ್ ಕೌರ್ ಎಲ್ಲರ ಗಮನ ಸೆಳೆದಿದ್ದರು. 22ರ ಹರೆಯದ ಸಿಫ್ಟ್ ಕೌರ್ ಒಲಿಂಪಿಕ್ಸ್ಗಾಗಿ ನಡೆದಿದ್ದ ಆಯ್ಕೆ ಟ್ರಯಲ್ಸ್ನಲ್ಲಿ ಅಗ್ರಸ್ಥಾನ ಪಡೆದು ಪ್ರಮುಖ ಸ್ಪರ್ಧೆಗೆ ಸಿದ್ದವಿರುವುದಾಗಿ ತೋರಿಸಿಕೊಟ್ಟಿದ್ದರು.