ಪ್ಯಾರಿಸ್ ಪ್ಯಾರಾಲಿಂಪಿಕ್ಸ್: ಪದಕ ವಿಜೇತರಿಗೆ ನಗದು ಬಹುಮಾನ ಪ್ರಕಟಿಸಿದ ಕೇಂದ್ರ ಕ್ರೀಡಾ ಸಚಿವ ಮಾಂಡವಿಯಾ

Update: 2024-09-10 15:57 GMT

PC : X \ @mansukhmandviya

ಹೊಸದಿಲ್ಲಿ: ಪ್ಯಾರಿಸ್ನಲ್ಲಿ ಇತ್ತೀಚೆಗೆ ಮುಕ್ತಾಯವಾಗಿರುವ ಪ್ಯಾರಾಲಿಂಪಿಕ್ ಗೇಮ್ಸ್ನಲ್ಲಿ ಪದಕ ವಿಜೇತರಿಗೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ನಗದು ಬಹುಮಾನವನ್ನು ಪ್ರಕಟಿಸಿದ್ದಾರೆ.

ಚಿನ್ನದ ಪದಕ ವಿಜೇತರಿಗೆ 75 ಲಕ್ಷ ರೂ., ಬೆಳ್ಳಿ ಪದಕ ಗೆದ್ದವರಿಗೆ 50 ಲಕ್ಷ ರೂ. ಹಾಗೂ ಕಂಚಿನ ಪದಕ ಜಯಿಸಿದವರಿಗೆ 30 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಮಾಂಡವಿಯಾ ಹೇಳಿದ್ದಾರೆ.

ಮಿಕ್ಸೆಡ್ ಟೀಮ್ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರಿರುವ ಬಿಲ್ಗಾರ್ತಿ ಶೀತಲ್ ದೇವಿ ಅವರಂತಹ ಕ್ರೀಡಾಪಟುಗಳಿಗೆ 22.5 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.

ಮೆಗಾ ಸ್ಪರ್ಧೆಯಲ್ಲಿ ಪದಕ ವಿಜೇತರಿಗೆ ಗೌರವ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಈ ಘೋಷಣೆ ಮಾಡಿದರು.

2028ರ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್ನಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿರುವ ಪ್ಯಾರಾ ಅತ್ಲೀಟ್ಗಳಿಗೆ ಎಲ್ಲ ರೀತಿಯ ಬೆಂಬಲ ಹಾಗೂ ಸೌಲಭ್ಯಗಳನ್ನು ನೀಡಲಾಗುವುದು ಎಂದು ಮಾಂಡವಿಯಾ ಭರವಸೆ ನೀಡಿದರು.

ದೇಶವು ಪ್ಯಾರಾಲಿಂಪಿಕ್ಸ್ ಹಾಗೂ ಪ್ಯಾರಾ ಕ್ರೀಡೆಗಳಲ್ಲಿ ಪ್ರಗತಿ ಸಾಧಿಸುತ್ತಿದೆ. 2016ರಲ್ಲಿ 4 ಪದಕಗಳನ್ನು ಜಯಿಸಿದ್ದ ಭಾರತವು 2021ರಲ್ಲಿ ಟೋಕಿಯೊದಲ್ಲಿ 19 ಪದಕಗಳನ್ನು ಜಯಿಸಿತ್ತು. ಇದೀಗ ಪ್ಯಾರಿಸ್ನಲ್ಲಿ ಒಟ್ಟು 29 ಪದಕಗಳನ್ನು ಗೆದ್ದುಕೊಂಡು ಪದಕಪಟ್ಟಿಯಲ್ಲಿ 18ನೇ ಸ್ಥಾನ ಪಡೆದಿದೆ ಎಂದು ಮಾಂಡವಿಯಾ ಹೇಳಿದ್ದಾರೆ.

ನಾವು ನಮ್ಮ ಎಲ್ಲ ಪ್ಯಾರಾ-ಅತ್ಲೀಟ್ಗಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇವೆ. ಇದರಿಂದ ನಾವು 2028ರ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್ನಲ್ಲಿ ಹೆಚ್ಚಿನ ಪದಕಗಳು ಹಾಗೂ ಚಿನ್ನದ ಪದಕಗಳನ್ನು ಗೆಲ್ಲಬಹುದು ಎಂದು ಮಾಂಡವಿಯಾ ಹೇಳಿದ್ದಾರೆ.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚಿನ ಪದಕಗಳ ಸಹಿತ ಒಟ್ಟು 29 ಪದಕಗಳೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಇದು ಸ್ಪರ್ಧಾವಳಿಯ ಇತಿಹಾಸದಲ್ಲಿ ಭಾರತದ ಸರ್ವಶ್ರೇಷ್ಠ ಪ್ರದರ್ಶನವಾಗಿದೆ.

ಈ ಅಮೋಘ ಪ್ರದರ್ಶನದ ನೆರವಿನಿಂದ ಭಾರತವು ಪ್ಯಾರಾಲಿಂಪಿಕ್ ಗೇಮ್ಸ್ ಇತಿಹಾಸದಲ್ಲಿ 50ಕ್ಕೂ ಅಧಿಕ ಪದಕ ಗೆದ್ದುಕೊಂಡಿದೆ.

ಫ್ರಾನ್ಸ್ ರಾಜಧಾನಿಯಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ ಮಂಗಳವಾರ ಸ್ವದೇಶಕ್ಕೆ ವಾಪಸಾದ ಭಾರತದ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ನೂರಾರು ಬೆಂಬಲಿಗರು ಅದ್ದೂರಿ ಸ್ವಾಗತ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News