ಪ್ಯಾರಿಸ್ ಪ್ಯಾರಾಲಿಂಪಿಕ್ಸ್ | ಇಬ್ಬರು ಕಾಂಗೊ ಅಥ್ಲೀಟ್‌ಗಳು ನಾಪತ್ತೆ, ಫ್ರಾನ್ಸ್‌ನಿಂದ ತನಿಖೆ ಆರಂಭ

Update: 2024-09-13 15:12 GMT

PC : X 

ಪ್ಯಾರಿಸ್ : ಇತ್ತೀಚೆಗೆ ಪ್ಯಾರಿಸ್ ಗೇಮ್ಸ್‌ನಲ್ಲಿ ಸ್ಪರ್ಧಿಸಿರುವ ಕಾಂಗೊದ ಇಬ್ಬರು ಪ್ಯಾರಾಲಿಂಪಿಕ್ಸ್ ಅಥ್ಲೀಟ್‌ಗಳು ನಾಪತ್ತೆಯಾಗಿರುವ ಕುರಿತಂತೆ ಫ್ರೆಂಚ್ ನ್ಯಾಯಾಂಗ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಪ್ಯಾರಿಸ್‌ನ ಉಪ ನಗರ ಬೊಬಿಗ್ನಿಯಲ್ಲಿರುವ ಪ್ರಾಸಿಕ್ಯೂಟರ್ ಕಚೇರಿಯು ಗುರುವಾರ ಧೃಢಪಡಿಸಿದೆ.

ನಮ್ಮ ಇಬ್ಬರು ಅಥ್ಲೀಟ್‌ಗಳು ನಾಪತ್ತೆಯಾಗಿದ್ದಾರೆ ಎಂದು ಕಾಂಗೋದ ಅಥ್ಲೀಟ್‌ಗಳ ನಿಯೋಗದ ಸದಸ್ಯರು ಅಧಿಕಾರಿಗಳಿಗೆ ದೂರು ನೀಡಿದ ಮರುದಿನವೇ ಸೆಪ್ಟಂಬರ್ 7ರಂದು ಪ್ರಾಸಿಕ್ಯೂಟರ್‌ಗಳು ತನಿಖೆಯನ್ನು ಆರಂಭಿಸಿದ್ದರು.

ಶಾಟ್‌ಪುಟ್ ಪಟು ಮಿರೆಲ್ಲೆ ನಂಗಾ ಹಾಗೂ ಗೈಡ್ ಜೊತೆಗಿದ್ದ ದೃಷ್ಟಿಹೀನ ಓಟಗಾರ ಇಮ್ಯಾನುಯೆಲ್ ಗ್ರೇಟ್ ಮೌಂಬಾಕೊ ಸೆ.5ರಂದು ಮೂರನೇ ವ್ಯಕ್ತಿಯೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಅಥ್ಲೀಟ್‌ಗಳ ಸೂಟ್‌ಕೇಸ್‌ಗಳು ಕಾಣೆಯಾಗಿವೆ. ಆದರೆ ಅವರ ಪಾಸ್‌ಪೋರ್ಟ್‌ಗಳು ಕಾಂಗೋ ನಿಯೋಗದ ಬಳಿಯೇ ಉಳಿದಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾವೆಲಿನ್ ಹಾಗೂ ಶಾಟ್‌ಪುಟ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಿರೆಲ್ಲೆ ನಂಗಾ ಹಾಗೂ ಇಮ್ಯಾನುಯೆಲ್ ಅವರು ಪ್ಯಾರಾಲಿಂಪಿಕ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಕಾಂಗೊದ ಧ್ವಜಧಾರಿಗಳಾಗಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News