ಒಲಿಂಪಿಕ್ಸ್ ನಿರಾಶೆಯ ಬಗ್ಗೆ ಮೌನ ಮುರಿದ ಫೋಗಟ್

Update: 2024-08-17 15:21 GMT

ವಿನೇಶ್ ಫೋಗಟ್ | PTI 

ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನುಭವಿಸಿದ ನಿರಾಶೆಯ ಬಗ್ಗೆ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಶುಕ್ರವಾರ ಮೌನ ಮುರಿದಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಕುಸ್ತಿ ಸ್ಪರ್ಧೆಯೊಂದರಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಕುಸ್ತಿಪಟು ಆಗಿ ಅವರು ಇತಿಹಾಸ ನಿರ್ಮಿಸಿದ್ದಾರೆ. ಆದರೆ, ಫೈನಲ್‌ಗೆ ಮುನ್ನ ನಡೆದ ದೇಹತೂಕ ತಪಾಸಣೆಯ ವೇಳೆ ಅವರ ತೂಕ ನಿಗದಿತ ಮಿತಿಗಿಂತ 100 ಗ್ರಾಮ್‌ನಷ್ಟು ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಒಲಿಂಪಿಕ್ಸ್‌ನಿಂದಲೇ ಅನರ್ಹಗೊಳಿಸಲಾಗಿತ್ತು. ಬಳಿಕ, ಅವರು ಒಲಿಂಪಿಕ್ ಆಡಳಿತ ಮಂಡಳಿಯ ನಿರ್ಧಾರವನ್ನು ಕ್ರೀಡಾ ಪಂಚಾಯಿತಿ ನ್ಯಾಯಾಲಯದಲ್ಲಿ ಪ್ರಶ್ನಿಸಿದರಾದರೂ, ವಿಚಾರಣೆಯ ಬಳಿಕ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಸ್ಪರ್ಧೆಯಿಂದ ಅನರ್ಹಗೊಂಡ ಬಳಿಕ, ಆಗಸ್ಟ್ 7ರಿಂದ 15ರವರೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಶುಕ್ರವಾರ ಅವರು ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮೂರು ಪುಟಗಳ ಸಂದೇಶವೊಂದನ್ನು ಹಾಕಿದ್ದಾರೆ.

‘‘ಕುಸ್ತಿಪಟುಗಳ ಪ್ರತಿಭಟನೆಯ ವೇಳೆ, ಭಾರತೀಯ ಮಹಿಳೆಯರ ಪಾವಿತ್ರ್ಯವನ್ನು, ಭಾರತೀಯ ಧ್ವಜದ ಪಾವಿತ್ರ್ಯ ಮತ್ತು ಮೌಲ್ಯಗಳನ್ನು ರಕ್ಷಿಸಲು ನಾನು ಹೊರಾಡುತ್ತಿದ್ದೆ. ಆದರೆ, ನಾನು ಭಾರತದ ಧ್ವಜವನ್ನು ಹಿಡಿದುಕೊಂಡಿದ್ದ 2023 ಮೇ 28ರ ಚಿತ್ರಗಳು (ಆ ದಿನ ಭಾರತದ ನೂತನ ಸಂಸತ್‌ನ ಉದ್ಘಾಟನೆಯ ದಿನವಾಗಿತ್ತು. ಭಾರತೀಯ ಕುಸ್ತಿ ಫೆಡರೇಶನ್‌ನ ಅಂದಿನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್‌ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಎಳೆಯ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ದಿಲ್ಲಿಯ ಜಂತರ್-ಮಂತರ್‌ನಲ್ಲಿ ತಿಂಗಳುಗಳಿಂದ ಧರಣಿ ನಡೆಯುತ್ತಿತ್ತು. ಆ ದಿನ ಪ್ರತಿಭಟನಕಾರರು ನ್ಯಾಯಕ್ಕಾಗಿ ಆಗ್ರಹಿಸಿ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ನೂತನ ಸಂಸತ್‌ನತ್ತ ಮೆರವಣಿಗೆಯಲ್ಲಿ ಸಾಗಿದ್ದರು. ಆಗ ಪೊಲೀಸರು ಮೆರವಣಿಗೆಯಲ್ಲಿ ಸಾಗುತ್ತಿದ್ದವರ ಮೇಲೆ ಲಾಠಿ ಚಾರ್ಜ್ ನಡೆಸಿ ಥಳಿಸಿ ಅವರನ್ನು ಬಂಧಿಸಿದ್ದರು.) ನನ್ನ ಕಣ್ಣೆದುರು ಬಂದು ಕಾಡುತ್ತಿವೆ. ಈ ಒಲಿಂಪಿಕ್ಸ್‌ನಲ್ಲಿ ಭಾರತೀಯ ಧ್ವಜವನ್ನು ಆಕಾಶದೆತ್ತರಕ್ಕೆ ಹಾರಿಸುವುದು, ತ್ರಿವರ್ಣ ಧ್ವಜದ ನೈಜ ಮೌಲ್ಯಗಳು ಸಾಕಾರಗೊಳ್ಳುವ ಮತ್ತು ಅದರ ಪಾವಿತ್ರ್ಯ ಗೌರವಿಸಲ್ಪಡುವ ಸಂದರ್ಭವೊಂದರಲ್ಲಿ ಅದನ್ನು (ಧ್ವಜವನ್ನು) ಹಿಡಿದುಕೊಂಡು ಚಿತ್ರ ತೆಗೆಸಿಕೊಳ್ಳಬೇಕು ಎನ್ನುವುದು ನನ್ನ ಬಯಕೆಯಾಗಿತ್ತು. ಹಾಗೆ ಆದರೆ, ನಮ್ಮ ಧ್ವಜ ಎದುರಿಸಿದ ಸಂಕಷ್ಟ ಮತ್ತು ಕುಸ್ತಿಗೆ ಒದಗಿದ ಪಾಡಿಗೆ ಒಂದು ಪರಿಹಾರ ಒದಗಬಹುದು ಎನ್ನುವುದು ನನ್ನ ನಿರೀಕ್ಷೆಯಾಗಿತ್ತು. ಇದನ್ನು ನನ್ನ ಸಹ ಭಾರತೀಯರಿಗೆ ತೋರಿಸಲು ನಾನು ಬಯಸಿದ್ದೆ’’ ಎಂದು ತನ್ನ ಸಂದೇಶದಲ್ಲಿ ಫೋಗಟ್ ಬರೆದಿದ್ದಾರೆ.

ನಾನು ಮತ್ತು ನನ್ನ ಸಂಗಡಿಗರು ಪರಿಸ್ಥಿತಿಯ ಎದುರು ತಲೆಬಾಗಲಿಲ್ಲ ಎಂದು ಅವರು ಹೇಳಿದ್ದಾರೆ.

‘‘ಹೇಳಲು ತುಂಬಾ ಇದೆ. ಆದರೆ ಅದಕ್ಕೆ ಪದಗಳು ಸಾಕಾಗುವುದಿಲ್ಲ. ಬಹುಷಃ, ಸಮಯ ಸರಿಯಿದೆ ಎಂದು ಅನಿಸಿದಾಗ ನಾನು ಇನ್ನೊಮ್ಮೆ ಮಾತನಾಡುತ್ತೇನೆ. ಆಗಸ್ಟ್ 6ರ ರಾತ್ರಿ ಮತ್ತು 7ರ ಬೆಳಗ್ಗೆಯ ಬಗ್ಗೆ ನಾನಿಷ್ಟೇ ಹೇಳಬಹುದು: ನಾವು ಬಿಟ್ಟುಕೊಡಲಿಲ್ಲ, ನಮ್ಮ ಪ್ರಯತ್ನಗಳು ನಿಲ್ಲಲಿಲ್ಲ, ಮತ್ತು ನಾವು ತಲೆಬಾಗಲಿಲ್ಲ. ಆದರೆ, ಗಡಿಯಾರ ನಿಂತಿತು ಮತ್ತು ಕಾಲ ಸರಿ ಇರಲಿಲ್ಲ’’ ಎಂದು ಅವರು ಬರೆದಿದ್ದಾರೆ.

‘‘ಇದು ನನ್ನ ವಿಧಿ. ನಾವು ಮಾಡುತ್ತಿದ್ದ ಕೆಲಸ, ನಾವು ಮಾಡಬೇಕಾಗಿದ್ದ ಸಾಧನೆ ಪೂರ್ಣಗೊಂಡಿಲ್ಲ ಎಂದು ನಾನು ನನ್ನ ತಂಡ, ಸಹ ಭಾರತೀಯರು, ನನ್ನ ಕುಟುಂಬಕ್ಕೆ ಹೇಳಬಯಸುತ್ತೇನೆ. ಕೆಲವೊಂದು ವಿಷಯಗಳು ಪರಿಪೂರ್ಣಗೊಳ್ಳದೇ ಇರಬಹುದು. ಬಹುಷಃ, ಭಿನ್ನ ಪರಿಸ್ಥಿತಿಯಲ್ಲಿ, 2032ರವರೆಗೆ ನಾನು ಆಡಬಹುದು ಎನಿಸುತ್ತದೆ. ಯಾಕೆಂದರೆ, ನನ್ನೊಳಗಿರುವ ಹೋರಾಟದ ಕಿಚ್ಚು ಮತ್ತು ಕುಸ್ತಿ ಯಾವತ್ತೂ ಕ್ಷೀಣಗೊಳ್ಳುವುದಿಲ್ಲ. ಭವಿಷ್ಯದಲ್ಲಿ ನಾನು ಏನಾಗುತ್ತೇನೆ ಮತ್ತು ಈ ಪ್ರಯಾಣದಲ್ಲಿ ಮುಂದೆ ಏನಾಗುತ್ತದೆ ಎನ್ನುವುದನ್ನು ಹೇಳಲಾರೆ. ಆದರೆ, ಯಾವುದು ಸರಿ ಎಂದು ನಾನು ಭಾವಿಸುತ್ತೇನೆಯೋ ಅದಕ್ಕಾಗಿ ಹೋರಾಡುವುದನ್ನು ನಾನು ಮುಂದುವರಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News