ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಕರೆ ಮಾಡಿ ಮಾತನಾಡಿದ ನರೇಂದ್ರ ಮೋದಿ
ಹೊಸದಿಲ್ಲಿ: ಟಿ-20 ವಿಶ್ವಕಪ್ ಗೆಲ್ಲುವ ಮೂಲಕ 11 ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಐಸಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ಭಾರತ ತಂಡಕ್ಕೆ ಇಂದು ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ತಂಡದ ಆಟಗಾರರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.
"ಇಂದು ಬೆಳಗ್ಗೆ ಭಾರತ ತಂಡಕ್ಕೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ತಂಡದ ಎಲ್ಲ ಆಟಗಾರರನ್ನು ಅಭಿನಂದಿಸಿದರು. ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಶ್ಲಾಘಿಸಿದ ಅವರು, ಅವರು ಟಿ-20 ವೃತ್ತಿಜೀವನವನ್ನು ಕೊಂಡಾಡಿದರು. ಫೈನಲ್ ಪಂದ್ಯದಲ್ಲಿ ತೋರಿದ ಪ್ರದರ್ಶನ ಹಾಗೂ ಭಾರತೀಯ ಕ್ರಿಕೆಟ್‌ಗೆ ನೀಡಿರುವ ಕೊಡುಗೆಯ ಕಾರಣಕ್ಕೆ ವಿರಾಟ್ ಕೊಹ್ಲಿಯನ್ನೂ ಅವರು ಅಭಿನಂದಿಸಿದರು" ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದರೊಂದಿಗೆ ಫೈನಲ್ ಪಂದ್ಯದ ಕಡೆಯ ಓವರ್ ಬೌಲ್ ಮಾಡಿದ ಹಾರ್ದಿಕ್ ಪಾಂಡ್ಯ, ಅದ್ಭುತ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್, ಜಸ್‌ಪ್ರೀತ್ ಬೂಮ್ರಾ ಪ್ರದರ್ಶನ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್‌ಗೆ ನೀಡಿರುವ ಕೊಡುಗೆಯನ್ನೂ ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ ಎಂದು ಹೇಳಲಾಗಿದೆ.