ಪ್ಯಾರಿಸ್ ಒಲಿಂಪಿಕ್ಸ್ ನಂತರ ಅಂತರರಾಷ್ಟ್ರೀಯ ಹಾಕಿಯಿಂದ ಪಿ.ಆರ್.ಶ್ರೀಜೇಶ್ ನಿವೃತ್ತಿ

Update: 2024-07-22 15:46 GMT

ಪಿ.ಆರ್.ಶ್ರೀಜೇಶ್ | PC : NDTV

ಹೊಸದಿಲ್ಲಿ : ಭಾರತದ ಹಿರಿಯ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್ ನಂತರ ಅಂತರರಾಷ್ಟ್ರೀಯ ಹಾಕಿಯಿಂದ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ. 

2006ರಲ್ಲಿ ಭಾರತದ ಪರ ಚೊಚ್ಚಲ ಪಂದ್ಯವನ್ನಾಡಿದ್ದ 36ರ ಹರೆಯದ ಶ್ರೀಜೇಶ್ ಅವರು ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ತನ್ನ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. 18 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.

ಶ್ರೀಜೇಶ್ ಪ್ಯಾರಿಸ್ ನಲ್ಲಿ ತನ್ನ ನಾಲ್ಕನೇ ಒಲಿಂಪಿಕ್ ಗೇಮ್ಸ್ ನಲ್ಲಿ ಭಾಗವಹಿಸಲಿದ್ದಾರೆ. ಟೋಕಿಯೊದಲ್ಲಿ ನಡೆದಿದ್ದ 2020ರ ಆವೃತ್ತಿಯ ಗೇಮ್ಸ್ನಲ್ಲಿ ಗೆದ್ದಿರುವ ತನ್ನ ಕಂಚಿನ ಪದಕಕ್ಕೆ ಇನ್ನೊಂದು ಪದಕ ಸೇರಿಸುವ ವಿಶ್ವಾಸದಲ್ಲಿದ್ದಾರೆ.

ನಾನು ಅಂತರರಾಷ್ಟ್ರೀಯ ಹಾಕಿಯಲ್ಲಿ ನನ್ನ ಅಂತಿಮ ಅಧ್ಯಾಯದ ಹೊಸ್ತಿಲಲ್ಲಿ ನಿಂತಾಗ ನನ್ನ ಹೃದಯ ಕೃತಜ್ಞತೆಯಿಂದ ಉಕ್ಕಿಬರುತ್ತಿದೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ಇಲ್ಲಿ ಒಂದು ಅಧ್ಯಾಯದ ಅಂತ್ಯವಾಗಲಿದ್ದು, ಹೊಸ ಸಾಹಸದ ಆರಂಭವಾಗಲಿದೆ. ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದು ಪದಗಳಿಗೆ ಮೀರಿದ ಗೌರವ. ವಿಶ್ವದ ಅತ್ಯುತ್ತಮ ಗೋಲ್ಕೀಪರ್ ಎಂದು ಗುರುತಿಸಲ್ಪಟ್ಟಿರುವುದು ಎಂದೆಂದಿಗೂ ಮರೆಯಲಾರದ ಮನ್ನಣೆಯಾಗಿದೆ. 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿ ಕನಸು ನನಸಾಗಿದೆ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಶ್ರೀಜೇಶ್ ಬರೆದಿದ್ದಾರೆ.

ಮೂರು ಒಲಿಂಪಿಕ್ ಗೇಮ್ಸ್, ಹಲವು ಕಾಮನ್ವೆಲ್ತ್ ಗೇಮ್ಸ್ ಹಾಗೂ ವಿಶ್ವಕಪ್ ಸಹಿತ ಭಾರತದ ಪರ 328 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಶ್ರೀಜೇಶ್ ಎರಡು ಬಾರಿ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ, ಎರಡು ಬಾರಿ ಏಶ್ಯಕಪ್ ಜಯಿಸಿದ್ದರು. ನಾಲ್ಕು ಪ್ರತ್ಯೇಕ ಸಂದರ್ಭಗಳಲ್ಲಿ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದ್ದರು.

2006ರ ದಕ್ಷಿಣ ಏಶ್ಯನ್ ಗೇಮ್ಸ್ ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ನಂತರ ಕೇರಳದ ಗೋಲ್ ಕೀಪರ್ ಶ್ರೀಜೇಶ್ ಅವರು 2014ರ ಏಶ್ಯನ್ ಗೇಮ್ಸ್ನಲ್ಲಿ ಚಿನ್ನ ಹಾಗೂ 2018ರ ಜಕಾರ್ತ ಏಶ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಸಹಿತ ಭಾರತದ ಹಲವಾರು ಸ್ಮರಣೀಯ ಗೆಲುವಿನ ಭಾಗವಾಗಿದ್ದರು. 2018ರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡ ಹಾಗೂ 2019ರ ಎಫ್ಐಎಚ್ ಪುರುಷರ ಸೀರಿಸ್ ಫೈನಲ್ ಚಾಂಪಿಯನ್ ತಂಡದ ಸದಸ್ಯರಾಗಿದ್ದರು.

ಭಾರತವು 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಶ್ರೀಜೇಶ್ ನಿರ್ಣಾಯಕ ಪಾತ್ರವಹಿಸಿದ್ದರು.ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತವು ಐತಿಹಾಸಿಕ ಕಂಚಿನ ಪದಕ ಗೆಲ್ಲುವಲ್ಲಿ ಶ್ರೀಜೇಶ್ ಮಹತ್ವದ ಕೊಡುಗೆ ನೀಡಿದ್ದರು.

ಶ್ರೀಜೇಶ್ಗೆ ದೇಶದ ಅತ್ಯುನ್ನತ ಕ್ರೀಡಾ ಗೌರವ ಖೇಲ್ ರತ್ನ ನೀಡಿ ಗೌರವಿಸಲಾಗಿದೆ.

2021ರಲ್ಲಿ ವರ್ಷದ ವರ್ಲ್ಡ್ ಗೇಮ್ಸ್ ಅತ್ಲೀಟ್ ಪ್ರಶಸ್ತಿಯನ್ನು ಜಯಿಸಿದ ಭಾರತದ ಎರಡನೇ ಕ್ರೀಡಾಪಟುವಾಗಿದ್ದಾರೆ. 2021 ಹಾಗೂ 2022ರಲ್ಲಿ ಸತತವಾಗಿ ಎಫ್ಐಎಚ್ ವರ್ಷದ ಗೋಲ್ಕೀಪರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಕಳೆದ ವರ್ಷ ಏಶ್ಯನ್ ಗೇಮ್ಸ್ನಲ್ಲಿ ಭಾರತವು ಚಿನ್ನದ ಪದಕ ಜಯಿಸಿ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಾಗ ಶ್ರೀಜೇಶ್ ತಂಡದ ಯಶಸ್ಸಿಗೆ ಕೊಡುಗೆ ನೀಡಿದ್ದರು.

ತಂಡವು ಪ್ಯಾರಿಸ್ 2024ರ ಅಭಿಯಾನವನ್ನು ಶ್ರೀಜೇಶ್ಗೆ ಸಮರ್ಪಿಸಲಿದೆ ಎಂದು ಭಾರತೀಯ ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಹೇಳಿದ್ದಾರೆ.

ಪ್ಯಾರಿಸ್ ಗೇಮ್ಸ್-2024 ನಿಜವಾಗಿಯೂ ವಿಶೇಷ ಪಂದ್ಯಾವಳಿ. ನಾವು ಲೆಜೆಂಡ್ ಪಿ.ಆರ್.ಶ್ರೀಜೇಶ್ಗೆ ನಮ್ಮ ಅಭಿಯಾನವನ್ನು ಸಮರ್ಪಿಸಲು ನಿರ್ಧರಿಸಿದ್ದೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ. 2016ರಲ್ಲಿ ಜೂನಿಯರ್ ವಿಶ್ವಕಪ್ ಪ್ರಶಸ್ತಿ ಗೆದ್ದಾಗ ಅವರ ಮೆಂಟರ್ ಶಿಪ್ ನನಗೆ ಈಗಲೂ ನೆನಪಿದೆ. ನಾವು ಶ್ರೀಜೇಶ್ ಗೋಸ್ಕರ ಈ ಬಾರಿ ಪದಕ ಗೆಲ್ಲಲು ಬಯಸಿದ್ದೇವೆ ಎಂದು ಹರ್ಮನ್ಪ್ರೀತ್ ಹೇಳಿದ್ದಾರೆ.

ಗೇಮ್ಸ್ಗಾಗಿ ಸ್ವಿಟ್ಸರ್ ಲ್ಯಾಂಡ್ನಲ್ಲಿ ತರಬೇತಿ ಪಡೆದಿರುವ ಭಾರತೀಯ ಹಾಕಿ ತಂಡ ಪ್ಯಾರಿಸ್ಗೆ ತಲುಪಿದೆ. ಜುಲೈ 27ರಂದು ನ್ಯೂಝಿಲ್ಯಾಂಡ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News