ಪ್ರತಿಭಟನೆಯ ಎಚ್ಚರಿಕೆ: ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂಭಾಗದಲ್ಲಿ ಪೊಲೀಸರ ನಿಯೋಜನೆ
ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಚೇರಿಯ ಮುಂಭಾಗದಲ್ಲಿ ಶುಕ್ರವಾರ ಗಲಭೆ ನಿಗ್ರಹ ಪೊಲೀಸರನ್ನು ನಿಯೋಜಿಸಲಾಗಿದೆ. ಗುರುವಾರ ನಡೆದ ವಿಶ್ವಕಪ್ ಪಂದ್ಯವೊಂದರಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಅನುಭವಿಸಿದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಉದ್ರಿಕ್ತ ಕ್ರಿಕೆಟ್ ಅಭಿಮಾನಿಗಳು ಪ್ರತಿಭಟನೆ ನಡೆಸಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಚೇರಿ ಎದುರು ಧರಣಿ ನಡೆಸುವುದಾಗಿ ಕೆಲವು ಅಭಿಮಾನಿಗಳು ಎಚ್ಚರಿಸಿದ ಬಳಿಕ ಮೈಟ್‌ಲ್ಯಾಂಡ್ ಪ್ಲೇಸ್‌ನಲ್ಲಿರುವ ಕ್ರಿಕೆಟ್ ಮಂಡಳಿಯ ಕಚೇರಿ ಸಮೀಪ ಜಲಫಿರಂಗಿ ಸಜ್ಜಿತ ಗಲಭೆ ನಿರೋಧಕ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಅಧ್ಯಕ್ಷ ಶಮ್ಮಿ ಸಿಲ್ವ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ರಾಜೀನಾಮೆ ನೀಡಬೇಕೆಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಾಯಿಸಿದ್ದಾರೆ.
ಈ ನಡುವೆ, ಮುಂಬೈಯ ವಾಂಖೇಡೆ ಸ್ಟೇಡಿಯಮ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು ಅನುಭವಿಸಿದ ಹೀನಾಯ ಸೋಲಿಗೆ ಕೋಚಿಂಗ್ ಸಿಬ್ಬಂದಿ ಮತ್ತು ಆಯ್ಕೆಗಾರರು ಸಮಗ್ರ ವಿವರಣೆಯನ್ನು ತುರ್ತಾಗಿ ನೀಡಬೇಕೆಂದು ಹೇಳಿಕೆಯೊಂದರಲ್ಲಿ ಶ್ರೀಲಂಕಾ ಕ್ರಿಕೆಟ್ ಸೂಚಿಸಿದೆ.
ಗುರುವಾರ ಭಾರತವು ಶ್ರೀಲಂಕಾವನ್ನು 302 ರನ್‌ಗಳ ಭರ್ಜರಿ ಅಂತರದಿಂದ ಸೋಲಿಸಿ ಈ ವಿಶ್ವಕಪ್‌ನಲ್ಲಿ ತನ್ನ ಸತತ ಏಳನೇ ವಿಜಯವನ್ನು ದಾಖಲಿಸಿದೆ. ಆ ಮೂಲಕ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಶ್ರೀಲಂಕಾ ಕ್ರಿಕೆಟ್‌ನ ಆಡಳಿತ ಮಂಡಳಿಯನ್ನು ಸಂಪೂರ್ಣವಾಗಿ ಪುನರ‌್ರಚಿಸಬೇಕೆಂದು ಕ್ರಿಕೆಟ್ ಅಭಿಮಾನಿಗಳು ಕರೆ ನೀಡಿದ್ದಾರೆ.