ರಣಜಿ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ ಚೇತೇಶ್ವರ್ ಪೂಜಾರ

Update: 2024-01-07 18:00 GMT

Photo : X/BCCO Domestic

ರಾಜ್ಕೋಟ್: ರಣಜಿ ಟ್ರೋಫಿ ಪಂದ್ಯವೊಂದರಲ್ಲಿ ದ್ವಿಶತಕ ಬಾರಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಚೇತೇಶ್ವರ್ ಪೂಜಾರ ಟೆಸ್ಟ್ ಕ್ರಿಕೆಟ್ ಗೆ ಹಿಂದಿರುಗುವ ನಿಟ್ಟಿನಲ್ಲಿ ಆಯ್ಕೆ ಮಂಡಳಿಯ ಕದ ತಟ್ಟಿದ್ದಾರೆ.

ರಾಜ್ಕೋಟ್‌ ನಲ್ಲಿ ನಡೆಯುತ್ತಿರುವ ಝಾರ್ಖಂಡ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಪರವಾಗಿ ಆಡುತ್ತಿರುವ ಪೂಜಾರ ರವಿವಾರ 17ನೇ ಪ್ರಥಮ ದರ್ಜೆ ದ್ವಿಶತಕ ಬಾರಿಸಿದ್ದಾರೆ.

ಭಾರತವು ಜನವರಿ 25ರಿಂದ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯೊಂದನ್ನು ಆಡುತ್ತಿದೆ. ಆ ಸರಣಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಶೀಘ್ರದಲ್ಲೇ ತಂಡವನ್ನು ಪ್ರಕಟಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಪೂಜಾರ ತನ್ನ ದ್ವಿಶತಕದ ಮೂಲಕ ತಂಡಕ್ಕೆ ಮರಳಲು ದಾವೆ ಮಂಡಿಸಿದ್ದಾರೆ ಎಂಬುದಾಗಿ ಭಾವಿಸಲಾಗಿದೆ.

ಹದಿನೇಳನೇ ದ್ವಿಶತಕದೊಂದಿಗೆ, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅತ್ಯಂತ ಹೆಚ್ಚು ದ್ವಿಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಪೂಜಾರ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಇತರ ಬ್ಯಾಟರ್ಗಳೆಂದರೆ- ಹರ್ಬರ್ಟ್ ಸಟ್ಕ್ಲಿಫ್ ಮತ್ತು ಮಾರ್ಕ್ ರಾಮ್ಪ್ರಕಾಶ್. ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವವರು 37 ದ್ವಿಶತಕಗಳನ್ನು ಬಾರಿಸಿರುವ ಆಸ್ಟ್ರೇಲಿಯದ ಸರ್ ಡೊನಾಲ್ಡ್ ಬ್ರಾಡ್ಮನ್ ಮತ್ತು 36 ದ್ವಿಶತಕಗಳನ್ನು ಗಳಿಸಿರುವ ಇಂಗ್ಲೆಂಡಿನ ವಾಲಿ ಹ್ಯಾಮಂಡ್ ಎರಡನೇ ಸ್ಥಾನದಲ್ಲಿದ್ದಾರೆ.

ಅದೂ ಅಲ್ಲದೆ, ಗರಿಷ್ಠ ಪ್ರಥಮ ದರ್ಜೆ ರನ್‌ ಗಳನ್ನು ಗಳಿಸಿರುವ ಭಾರತೀಯ ಕ್ರಿಕೆಟಿಗರ ಪಟ್ಟಿಯಲ್ಲಿ, ವಿ.ವಿ.ಎಸ್. ಲಕ್ಷ್ಮಣ್ ರನ್ನು ಹಿಂದಿಕ್ಕಿ ಪೂಜಾರ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಪ್ರಥಮ ಸ್ಥಾನದಲ್ಲಿ ಸುನೀಲ್ ಗವಾಸ್ಕರ್, ದ್ವಿತೀಯ ಸ್ಥಾನದಲ್ಲಿ ಸಚಿನ್ ತೆಂಡುಲ್ಕರ್ ಮತ್ತು ಮೂರನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಇದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News