ಡೆನ್ಮಾರ್ಕ್ ಓಪನ್: ಪಿ.ವಿ. ಸಿಂಧುಗೆ ಸೋಲು
ಕೋಪನ್‌ಹೇಗನ್ : ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಇಂಡೋನೇಶ್ಯದ ಗ್ರಿಗೊರಿಯಾ ಮರಿಸ್ಕಾ ವಿರುದ್ದ ಸೋಲನುಭವಿಸುವ ಮೂಲಕ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 750 ಟೂರ್ನಮೆಂಟ್ ಡೆನ್ಮಾರ್ಕ್ ಓಪನ್‌ನಲ್ಲಿ ಭಾರತದ ಸವಾಲು ಅಂತ್ಯವಾಗಿದೆ.
2015ರಲ್ಲಿ ರನ್ನರ್ಸ್ ಅಪ್ ಆಗಿದ್ದ ಸಿಂಧು ಶುಕ್ರವಾರ 57 ನಿಮಿಷಗಳಲ್ಲಿ ಕೊನೆಗೊಂಡಿರುವ ಅಂತಿಮ-8ರ ಹಣಾಹಣಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಮರಿಸ್ಕಾ ಎದುರು 13-21, 21-16, 9-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ವಿಶ್ವದ ನಂ.8ನೇ ಆಟಗಾರ್ತಿ ಮರಿಸ್ಕಾ ಹಿಂದಿನ 12 ಪಂದ್ಯಗಳಲ್ಲಿ ಸಿಂಧು ಅವರನ್ನು ಕೇವಲ ಎರಡು ಬಾರಿ ಸೋಲಿಸಿದ್ದಾರೆ.
ಚೀನಾದ ಹಾನ್ ಯುಇ ಅವರನ್ನು 18-21, 21-12, 21-16 ಗೇಮ್‌ಗಳ ಅಂತರದಿಂದ ಮಣಿಸುವ ಮೂಲಕ ಸಿಂಧು ಕ್ವಾರ್ಟರ್ ಫೈನಲ್ ತಲುಪಿದ್ದರು.
ಒಲಿಂಪಿಕ್ಸ್‌ನಲ್ಲಿ ಅಂತಿಮ 16ರ ಸುತ್ತಿನಲ್ಲಿ ಚೀನಾದ ಹೀ ಬಿಂಗ್ ಜಿಯಾವೊ ಎದುರು ಸೋತ ನಂತರ ಸಿಂಧು ಆಡಿರುವ 2ನೇ ಪಂದ್ಯಾವಳಿ ಇದಾಗಿದೆ.