ರಹಾನೆ, ಪೃಥ್ವಿ ಶಾ, ಶಿವಂ ದುಬೆ ಸಾಹಸ: ದಾಖಲೆ ಬರೆದ ಮುಂಬೈ ತಂಡ

Update: 2024-12-12 08:01 GMT

PC: x.com/CricketNDTV

ಮುಂಬೈ: ಹಲವು ರೋಚಕ ತಿರುವುಗಳನ್ನು ಕಂಡ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಸೆಮಿಫೈನಲ್ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಮುಂಬೈ ತಂಡ ವಿದರ್ಭ ತಂಡವನ್ನು ಸೋಲಿಸುವ ಜತೆಗೆ ದಾಖಲೆ ನಿರ್ಮಿಸಿದೆ.

ವಿದರ್ಭ ತಂಡ ಬುಧವಾರ ನಡೆದ ಪಂದ್ಯದಲ್ಲಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್ ಗಳನ್ನು ಗಳಿಸಿತ್ತು. ಇದನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಶ್ರೇಯಸ್ ಅಯ್ಯರ್ ನೇತೃತ್ವದ ಮುಂಬೈ ತಂಡ 220ಕ್ಕಿಂತ ಹೆಚ್ಚು ಮೊತ್ತವನ್ನು ಬೆನ್ನಟ್ಟಿ ಗೆದ್ದು ದಾಖಲೆ ಸೃಷ್ಟಿಸಿತು. ನಾಕೌಟ್‌ ಪಂದ್ಯದಲ್ಲಿ ಅತಿಹೆಚ್ಚು ಮೊತ್ತವನ್ನು ಬೆನ್ನಟ್ಟಿ ಗೆದ್ದ ತಂಡ ಎಂಬ ಕೀರ್ತಿಯೂ ಮುಂಬೈ ತಂಡದ ಪಾಲಾಯಿತು.

ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ 2010 ರ ಫೈಸಲ್ ಬ್ಯಾಂಕ್ ಟಿ20 ಕಪ್‌ನ ಸೆಮಿಫೈನಲ್‌ನಲ್ಲಿ ರಾವಲ್ಪಿಂಡಿ ರಾಮ್ಸ್ ವಿರುದ್ಧ ಕರಾಚಿ ಡಾಲ್ಫಿನ್ಸ್‌ 210 ರನ್ ಬೆನ್ನತ್ತಿ ಗೆದ್ದಿದ್ದು ಈವರೆಗೆ ನಾಕೌಟ್ ಪಂದ್ಯದ ಗರಿಷ್ಠ ರನ್ ಚೇಸ್ ಆಗಿತ್ತು. ಈ ದಾಖಲೆಯನ್ನು ಮುಂಬೈ ತಂಡ ಮುರಿದಿದೆ.

ಅಜಿಂಕ್ಯ ರಹಾನೆ (45 ಎಸೆತಗಳಲ್ಲಿ 84, 10 ಬೌಂಡರಿ, 3 ಸಿಕ್ಸರ್) ಗಣನೀಯ ಕೊಡುಗೆ ನೀಡಿದರು. ಇನ್ನೂ 4 ಎಸೆತಗಳಿರುವಂತೆಯೇ ಮುಂಬೈ ತಂಡ 224 ರನ್ ಗಳಿಸಿ ವಿಜಯ ನಗೆ ಬೀರಿತು. ಶನಿವಾರ ಮುಂಬೈ ತಂಡ ಸೆಮಿಫೈನಲ್ ನಲ್ಲಿ ಬರೋಡಾವನ್ನು ಎದುರಿಸಲಿದೆ.

ಆರಂಭಿಕ ಬ್ಯಾಟ್ಸ್ ಮನ್ ಪೃಥ್ವಿ ಶಾ ಮೊದಲ ಎಸೆತದಿಂದಲೇ ದೊಡ್ಡ ಹೊಡೆತಗಳಿಗೆ ಕೈಹಾಕಿ ಕೇವಲ 26 ಎಸೆತಗಳಲ್ಲಿ 49 ರನ್ ಗಳಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. ಪೃಥ್ವಿ ಶಾ ಬ್ಯಾಟ್ ನಿಂದ ಸಿಡಿದ ಐದು ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದಾಗಿ ಮುಂಬೈ ತಂಡ ಮೊದಲ 7 ಓವರ್ ಗಳಲ್ಲಿ 83 ರನ್ ಗಳನ್ನು ಕಲೆ ಹಾಕಿತು. ಎಡಗೈ ವೇಗಿ ದೀಪೇಶ್ ಪರ್ವಾನಿಯವರಿಗೆ ಶಾ ವಿಕೆಟ್ ಒಪ್ಪಿಸಿದಲ್ಲಿಂದ ಮುಂಬೈ ಆತಂಕದ ಕ್ಷಣಗಳನ್ನು ಎದುರಿಸಬೇಕಾಯಿತು. ನಾಯಕ ಶ್ರೇಯಸ್ ಅಯ್ಯರ್ (5) ಮತ್ತು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ (9) ಅವರ ವಿಕೆಟ್ ಗಳನ್ನು ಶೀಘ್ರವಾಗಿ ಕಳೆದುಕೊಂಡ ಮುಂಬೈ 11.1 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತ್ತು. ಅಂತಿಮ ಎಂಟು ಓವರ್ ಗಳಿಂದ ಗೆಲುವಿಗೆ 104 ರನ್ ಗಳಿಸಬೇಕಿತ್ತು.

ಆಕರ್ಷಕ ಹೊಡೆತಗಳಿಂದ ಮಿಂಚಿತ ರಹಾನೆ ಔಟ್ ಆಗುವ ವೇಳೆಗೆ ತಂಡ 15.1 ಓವರ್ ಗಳಲ್ಲಿ 157 ರನ್ ಗಳಿಸಿತ್ತು. ಆದರೆ ಶಿವಂ ದುಬೆ (22 ಎಸೆತಗಳಲ್ಲಿ ನಾಟೌಟ್ 37) ಮತ್ತು ಸುಯಾಂಶ್ ಶೆಡ್ಗೆ (12 ಎಸೆತದಲ್ಲಿ 36) ನಾಲ್ಕು ಓವರ್ ಗಳಲ್ಲಿ 67 ರನ್ ಗಳನ್ನು ಸಿಡಿಸಿ ಗೆಲುವಿನ ಆಸೆ ಜೀವಂತವಾಗಿರಿಸಿದರು. ಆಫ್ ಸ್ಪಿನ್ನರ್ ಮಂದರ್ ಮಹಾಲೆ ಅವರ 17ನೇ ಓವರ್ ನಲ್ಲಿ ಮೂರು ಸಿಕ್ಸ್ ಮತ್ತು ಬೌಂಡರಿ ಸಹಿತ 22 ರನ್ ಗಳನ್ನು ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News