ಲಕ್ನೊ ತಂಡದಿಂದ ರಾಹುಲ್ ನಿರ್ಗಮನ | ಮೌನ ಮುರಿದ ಸಂಜೀವ್ ಗೋಯೆಂಕಾ

Update: 2024-12-12 20:55 IST
KL Rahul, Sanjeev Goenka

ಕೆ.ಎಲ್.ರಾಹುಲ್ , ಸಂಜೀವ್ ಗೋಯೆಂಕಾ | PC ; PTI 

  • whatsapp icon

ಹೊಸದಿಲ್ಲಿ : ಕೆ.ಎಲ್.ರಾಹುಲ್ ತಮ್ಮ ಫ್ರಾಂಚೈಸಿಯಿಂದ ನಿರ್ಗಮಿಸಿರುವ ಕುರಿತಂತೆ ಲಕ್ನೊ ಸೂಪರ್ ಜಯಂಟ್ಸ್(ಎಲ್‌ಎಸ್‌ಜಿ)ಮಾಲಕ ಸಂಜೀವ್ ಗೋಯೆಂಕಾ ಮೌನ ಮುರಿದಿದ್ದಾರೆ.

ಬ್ಯಾಟರ್ ರಾಹುಲ್ ನನಗೆ ಯಾವಾಗಲೂ ಕುಟುಂಬದ ಸದಸ್ಯನಂತಿದ್ದರು. ಅವರು ತುಂಬಾ ಪ್ರಾಮಾಣಿಕ ಹಾಗೂ ಸಭ್ಯ ವ್ಯಕ್ತಿಯಾಗಿದ್ದಾರೆ ಎಂದು ಸಂಜೀವ್ ಹೇಳಿದ್ದಾರೆ.

ಮೂರು ವರ್ಷಗಳ ಕಾಲ ಲಕ್ನೊ ತಂಡವನ್ನು ನಾಯಕನಾಗಿ ಮುನ್ನಡೆಸಿರುವ ರಾಹುಲ್‌ರನ್ನು ಈ ಬಾರಿ ತಂಡದಲ್ಲಿ ಉಳಿಸಿಕೊಳ್ಳದಿರಲು ಸಂಜೀವ್ ಗೋಯೆಂಕಾ ನಿರ್ಧರಿಸಿದ ನಂತರ ಐಪಿಎಲ್ 2025ರ ಮೆಗಾ ಹರಾಜಿನ ವೇಳೆ ರಾಹುಲ್‌ ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 14 ಕೋ.ರೂ.ಗೆ ಖರೀದಿಸಿತ್ತು.

ಕೆ.ಎಲ್.ರಾಹುಲ್ ನನಗೆ ಯಾವಾಗಲೂ ಕುಟುಂಬದ ಸದಸ್ಯನಾಗಿದ್ದರು. ಅವರು ಲಕ್ನೊ ತಂಡವನ್ನು 3 ವರ್ಷಗಳ ಕಾಲ ನಾಯಕನಾಗಿ ಮುನ್ನಡೆಸಿದ್ದರು. ತನ್ನ ಅವಧಿಯಲ್ಲಿ ಉತ್ತಮ ಫಲಿತಾಂಶವನ್ನು ತಂದಿದ್ದರು. ನಾನು ಅವರಿಗೆ ಮನಪೂರ್ವಕವಾಗಿ ಯಶಸ್ಸನ್ನು ಹಾರೈಸುವೆ. ಜಾಗತಿಕ ಮಟ್ಟದಲ್ಲಿ ರಾಹುಲ್ ಪ್ರತಿಭೆಯು ಮತ್ತಷ್ಟು ಹೊಳೆಯುವ ವಿಶ್ವಾಸ ನನಗಿದೆ. ಅವರೊಬ್ಬ ಉತ್ತಮ ವ್ಯಕ್ತಿಯಾಗಿದ್ದಾರೆ ಎಂದು ಗೋಯೆಂಕಾ ಹೇಳಿದ್ದಾರೆ.

ಅವರೊಬ್ಬ ತುಂಬಾ ಪ್ರಾಮಾಣಿಕ ಹಾಗೂ ಸಭ್ಯ ವ್ಯಕ್ತಿ. ಅವರಂತಹ ಪ್ರಾಮಾಣಿಕ ವ್ಯಕ್ತಿಗೆ ಎಲ್ಲವೂ ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ಅವರು ತುಂಬಾ ಪ್ರತಿಭಾವಂತ ಆಟಗಾರ. ತನ್ನ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಲಿ ಎಂದು ಹಾರೈಸುವೆ. ಅವರು ಉತ್ತಮ ಪ್ರದರ್ಶನ ನೀಡುವ ಕುರಿತು ವಿಶ್ವಾಸವಿದೆ. ಅವರಿಗೆ ನನ್ನ ಶುಭ ಹಾರೈಕೆಗಳು ಎಂದು ಗೋಯೆಂಕಾ ಹೇಳಿದ್ದಾರೆ.

2024ರ ಐಪಿಎಲ್ ಋತುವಿನ ಅಂತ್ಯದಲ್ಲಿ ರಾಹುಲ್ ಅವರೊಂದಿಗೆ ಗೋಯೆಂಕಾ ಸಂಬಂಧವು ಹದಗೆಟ್ಟಿತ್ತು. ಆ ನಂತರ ಇದೇ ಮೊದಲ ಬಾರಿ ಗೋಯೆಂಕಾ ಪ್ರತಿಕ್ರಿಯಿಸಿದ್ದಾರೆ.

2024ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ದ ಲಕ್ನೊ ತಂಡವು 10 ವಿಕೆಟ್‌ಗಳಿಂದ ಸೋತ ನಂತರ ಗೋಯೆಂಕಾ ಹಾಗೂ ರಾಹುಲ್ ನಡುವಿನ ಚರ್ಚೆಯು ವಿವಾದ ಹುಟ್ಟುಹಾಕಿತ್ತು. ಈ ಇಬ್ಬರ ನಡುವಿನ ಮಾತಿನ ಚಕಮಕಿಯ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು.

ತನ್ನ ವೈಯಕ್ತಿಕ ಗುರಿಗಳಿಗಿಂತ ತಂಡವೇ ಮುಖ್ಯ ಎಂದು ಪರಿಗಣಿಸುವ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಎಲ್‌ ಎಸ್‌ ಜಿ ಮಾಲಕ ಗೋಯೆಂಕಾ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News