IPL 2024| ಬಟ್ಲರ್ ಶತಕ: ಆರ್‌ಸಿಬಿ ವಿರುದ್ಧ ರಾಜಸ್ಥಾನಕ್ಕೆ 6 ವಿಕೆಟ್‌ಗಳ ಜಯ

Update: 2024-04-06 17:46 GMT

Photo:X/@IPL

ಜೈಪುರ: ಜೋಸ್ ಬಟ್ಲರ್ (ಔಟಾಗದೆ 100, 58 ಎಸೆತ, 9 ಬೌಂಡರಿ, 4 ಸಿಕ್ಸರ್) ಶತಕ ಹಾಗೂ ಸಂಜು ಸ್ಯಾಮ್ಸನ್ (69 ರನ್) ಅರ್ಧಶತಕದ ಕೊಡುಗೆಯ ನೆರವಿನಿಂದ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡ ಶನಿವಾರ ನಡೆದ 19ನೇ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿದೆ.

ಸವಾಯಿ ಮಾನ್‌ಸಿಂಗ್ ಸ್ಟೇಡಿಯಮ್‌ನಲ್ಲಿ ಗೆಲ್ಲಲು 184 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ 19.1 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸಿತು.

ಯಶಸ್ವಿ ಜೈಸ್ವಾಲ್(0)ವಿಕೆಟನ್ನು ಬೇಗನೆ ಕಳೆದುಕೊಂದ ರಾಜಸ್ಥಾನದ ಪರ 2ನೇ ವಿಕೆಟ್‌ಗೆ 148 ರನ್ ಗಳಿಸಿದ ಬಟ್ಲರ್ ಹಾಗೂ ಸ್ಯಾಮ್ಸನ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ರಿಯಾನ್ ಪರಾಗ್ (4 ರನ್), ಧ್ರುವ್ ಜುರೆಲ್ (2 ರನ್) ಅಲ್ಪ ಮೊತ್ತಕ್ಕೆ ಔಟಾದರು. ನಾಯಕ ಸ್ಯಾಮ್ಸನ್(69 ರನ್, 42 ಎಸೆತ, 8 ಬೌಂಡರಿ, 2 ಸಿಕ್ಸರ್)ಅರ್ಧಶತಕ ಗಳಿಸಿ ಔಟಾದರು.

ಬಟ್ಲರ್ ಅವರು ರಾಜಸ್ಥಾನ ತಂಡಕ್ಕೆ ಇನ್ನೂ 5 ಎಸೆತ ಬಾಕಿ ಇರುವಾಗಲೇ ಜಯ ತಂದುಕೊಟ್ಟರು.

►ವಿರಾಟ್ ಕೊಹ್ಲಿ 8ನೇ ಶತಕ ,ಆರ್‌ಸಿಬಿ 183/3

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಏಕಾಂಗಿ ಹೋರಾಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 183 ರನ್ ಗಳಿಸಿತು.

ಕೊಹ್ಲಿ 67 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಾಯದಿಂದ ದಾಖಲೆಯ 8ನೇ ಶತಕ ಪೂರೈಸಿದರು. ಪ್ರಸಕ್ತ ಋತುವಿನ ಐಪಿಎಲ್‌ನಲ್ಲಿ ಶತಕ ಗಳಿಸಿದ ಮೊದಲ ಬ್ಯಾಟರ್ ಆಗಿದ್ದಾರೆ. ಕೊಹ್ಲಿ ಟಿ-20 ಕ್ರಿಕೆಟ್‌ನಲ್ಲಿ ಗಳಿಸಿದ 9ನೇ ಶತಕ ಇದಾಗಿದೆ. ಗರಿಷ್ಠ ಟಿ-20 ಶತಕವೀರರ ಪಟ್ಟಿಯಲ್ಲಿ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ ಗೇಲ್(22 ಶತಕ) ಹಾಗೂ ಬಾಬರ್ ಆಝಮ್(11) ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಸದ್ಯ 5 ಪಂದ್ಯಗಳಲ್ಲಿ 316 ರನ್ ಗಳಿಸಿರುವ ಕೊಹ್ಲಿ ಟಾಪ್ ರನ್ ಸ್ಕೋರರ್ ಆಗಿದ್ದಾರೆ. 72 ಎಸೆತಗಳಲ್ಲಿ ಔಟಾಗದೆ 113 ರನ್ ಗಳಿಸಿದ ಕೊಹ್ಲಿ ಆರ್‌ಸಿಬಿಯ ಒಟ್ಟು ರನ್‌ನಲ್ಲಿ ಶೇ.38ರಷ್ಟು ತಾವೊಬ್ಬರೇ ಗಳಿಸಿದರು. ಕೊಹ್ಲಿ ಒಟ್ಟು 12 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಸಿಡಿಸಿದ್ದು, ಅವರಿಗೆ ನಾಯಕ ಎಫ್‌ಡು ಪ್ಲೆಸಿಸ್(44 ರನ್, 33 ಎಸೆತ, 2 ಬೌಂಡರಿ, 2 ಸಿಕ್ಸರ್)ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಪ್ಲೆಸಿಸ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಕೊಹ್ಲಿ ಮೊದಲ ವಿಕೆಟ್‌ಗೆ 125 ರನ್ ಜೊತೆಯಾಟ ನಡೆಸಿ ಆರ್‌ಸಿಬಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಆರ್‌ಸಿಬಿ ಪ್ರಸಕ್ತ ಐಪಿಎಲ್‌ನಲ್ಲಿ ಮೊದಲ ಬಾರಿ ಉತ್ತಮ ಆರಂಭ ಪಡೆಯಿತು. ಕೊಹ್ಲಿ ಹಾಗೂ ಪ್ಲೆಸಿಸ್ ಪವರ್‌ಪ್ಲೇ ಓವರ್‌ನೊಳಗೆ 53 ರನ್ ಗಳಿಸಿದರು. 5ನೇ ಓವರ್‌ನಲ್ಲಿ ಕೇವಲ 3 ರನ್ ನೀಡಿದ ಆರ್.ಅಶ್ವಿನ್ ಅಮೋಘ ಬೌಲಿಂಗ್ ಮಾಡಿದರು.

39 ಎಸೆತಗಳಲ್ಲಿ ಈ ಋತುವಿನಲ್ಲಿ ಮೂರನೇ ಅರ್ಧಶತಕ ತಲುಪಿದ ಕೊಹ್ಲಿ ಮುಂದಿನ 50 ರನ್ ಗಳಿಸಲು ಕೇವಲ 28 ಎಸೆತಗಳನ್ನು ತೆಗೆದುಕೊಂಡರು. 19ನೇ ಓವರ್‌ನಲ್ಲಿ ನಾಂಡ್ರೆ ಬರ್ಗೆರ್ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸಿದ ಕೊಹ್ಲಿ ಶತಕ ಪೂರೈಸಿದರು.

36 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಪ್ಲೆಸಿಸ್ 14ನೇ ಓವರ್‌ನಲ್ಲಿ ಚಹಾಲ್‌ಗೆ ವಿಕೆಟ್ ಒಪ್ಪಿಸಿದರು. 66 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಕೊಹ್ಲಿ ಔಟಾಗದೆ 113 ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್(1 ರನ್) ಹಾಗೂ ಚೊಚ್ಚಲ ಪಂದ್ಯವನ್ನಾಡಿದ ಎಡಗೈ ಬ್ಯಾಟರ್ ಸೌರವ್ ಚೌಹಾಣ್ (9 ರನ್)ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಚೌಹಾಣ್ ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯ ಫಾರ್ಮ್‌ನ್ನು ಪುನರಾವರ್ತಿಸುವಲ್ಲಿ ವಿಫಲರಾದರು.

ರಾಜಸ್ಥಾನದ ಸ್ಪಿನ್‌ದ್ವಯರಾದ ಆರ್.ಅಶ್ವಿನ್ (0/28) ಹಾಗೂ ಯಜುವೇಂದ್ರ ಚಹಾಲ್ (2-34)ಮಧ್ಯಮ ಓವರ್‌ಗಳಲ್ಲಿ ರನ್‌ಗೆ ಕಡಿವಾಣ ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News