ರಣಜಿ ಟ್ರೋಫಿ | ಸರ್ವಿಸಸ್ ವಿರುದ್ದ ಜಮ್ಮು-ಕಾಶ್ಮೀರಕ್ಕೆ ಭರ್ಜರಿ ಜಯ
ಶ್ರೀನಗರ : ವೇಗದ ಬೌಲರ್ ಉಮರ್ ನಝೀರ್ ಮಿರ್ ಅವರ ಅಮೋಘ ಬೌಲಿಂಗ್(6-53)ನೆರವಿನಿಂದ ಜಮ್ಮು-ಕಾಶ್ಮೀರ ತಂಡವು ಈಗ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ತನ್ನ ಮೊದಲ ಜಯ ದಾಖಲಿಸಿದೆ.
ಎ ಗುಂಪಿನ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡವು ಸರ್ವಿಸಸ್ ತಂಡವನ್ನು ಇನಿಂಗ್ಸ್ ಹಾಗೂ 25 ರನ್‌ಗಳ ಅಂತರದಿಂದ ಮಣಿಸಿದೆ.ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.
ಉಮರ್ ನಝೀರ್ 12 ಓವರ್‌ಗಳಲ್ಲಿ 1 ಮೇಡನ್ ಸಹಿತ 53 ರನ್ ನೀಡಿ 6 ವಿಕೆಟ್‌ಗಳನ್ನು ಉರುಳಿಸಿದರು. ಇದರೊಂದಿಗೆ ಸರ್ವಿಸಸ್ ತಂಡವನ್ನು 2ನೆ ಇನಿಂಗ್ಸ್ ನಲ್ಲಿ 32 ಓವರ್ ಗಳಲ್ಲಿ ಕೇವಲ 132 ರನ್‌ಗೆ ಆಲೌಟ್ ಮಾಡಿದರು.
ಜಮ್ಮು ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ 228 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಸರ್ವಿಸಸ್ ತನ್ನ ಮೊದಲ ಇನಿಂಗ್ಸ್ ನಲ್ಲಿ ಕೇವಲ 77 ರನ್ ಗಳಿಸಿತು.
ಸರ್ವಿಸಸ್ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್(5-29)ಪಡೆದಿದ್ದ ಯುದ್ಧವೀರ್ ಸಿಂಗ್ ಎರಡನೇ ಇನಿಂಗ್ಸ್ ನಲ್ಲೂ ಮೂರು ವಿಕೆಟ್‌ಗಳನ್ನು(3-35)ಕಬಳಿಸಿದರು. ಈ ಮೂಲಕ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಗಳನ್ನು ಪಡೆದರು. ಈ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಜಮ್ಮು-ಕಾಶ್ಮೀರ ತಂಡ ಕೇವಲ ಎರಡೇ ದಿನಗಳಲ್ಲಿ ಪಂದ್ಯವನ್ನು ಜಯಿಸಿದೆ.
7 ವಿಕೆಟ್ ನಷ್ಟಕ್ಕೆ 183 ರನ್‌ನಿಂದ ತನ್ನ ಇನಿಂಗ್ಸ್ ಮುಂದುವರಿಸಿದ ಜಮ್ಮು-ಕಾಶ್ಮೀರ ಇನ್ನೂ 45 ರನ್ ಸೇರಿಸಿತು. ಈ ಮೂಲಕ ತನ್ನ ಮುನ್ನಡೆಯನ್ನು 157ಕ್ಕೆ ವಿಸ್ತರಿಸಿತು.
ಸರ್ವಿಸಸ್ ಪರ ಶುಭಮ್ ರೊಹಿಲ್ಲಾ(47ರನ್), ಜಯಂತ್ ಗೊಯತ್(27 ರನ್)ಹಾಗೂ ಅರುಣ್ ಕುಮಾರ್(20ರನ್)ಎರಡಂಕೆಯ ಸ್ಕೋರ್ ಗಳಿಸಿದರು.
► ತ್ರಿಪುರಾ ವಿರುದ್ಧ ಮುಂಬೈ ಮೇಲುಗೈ
ಶಮ್ಸ್ ಮುಲಾನಿ(71 ರನ್), ಹಿಮಾಂಶು ಸಿಂಗ್(59 ರನ್)ಹಾಗೂ ಶಾರ್ದೂಲ್ ಠಾಕೂರ್(62 ರನ್)ಕೆಳ ಕ್ರಮಾಂಕದಲ್ಲಿ ಗಳಿಸಿದ ಅರ್ಧಶತಕಗಳ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ತಂಡವು ಆತಿಥೇಯ ತ್ರಿಪುರಾ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 450 ರನ್ ಗಳಿಸಿದೆ.
ಇದಕ್ಕುತ್ತರವಾಗಿ ದಿನದಾಟದಂತ್ಯಕ್ಕೆ ತ್ರಿಪುರಾ ತಂಡವು 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ. ಜೀವನ್‌ಜೋತ್ ಸಿಂಗ್(39)ಹಾಗೂ ಪರ್ವೆಝ್ ಸುಲ್ತಾನ್(1)ಕ್ರೀಸ್ ನಲ್ಲಿದ್ದಾರೆ.
6 ವಿಕೆಟ್‌ಗಳ ನಷ್ಟಕ್ಕೆ 248 ರನ್ ನಿಂದ ತನ್ನ ಬ್ಯಾಟಿಂಗ್ ಮುಂದುವರಿಸಿದ ಮುಂಬೈ ತಂಡದ ಪರ ಮುಲಾನಿ ಹಾಗೂ ಹಿಮಾಂಶು 61 ರನ್ ಸೇರಿಸಿದರು. ಮಣಿಶಂಕರ್(3-117) ಈ ಜೋಡಿಯನ್ನು ಬೇರ್ಪಡಿಸಿದರು.
ಆ ನಂತರ ಶಾರ್ದೂಲ್ ಜೊತೆ ಕೈಜೋಡಿಸಿದ ಹಿಮಾಂಶು 85 ರನ್ ಜೊತೆಯಾಟ ನಡೆಸಿದರು.
ಶಾರ್ದೂಲ್ ಕೇವಲ 53 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳ ಸಹಿತ 62 ರನ್ ಗಳಿಸಿದರು.