ರಣಜಿ ಟ್ರೋಫಿ | ಮಯಾಂಕ್ ಶತಕ, ಕರ್ನಾಟಕ ತಂಡಕ್ಕೆ ಕನಿಷ್ಠ 3 ಅಂಕ ಖಚಿತ

Update: 2024-10-28 16:10 GMT

 ಮಯಾಂಕ್ ಅಗರ್ವಾಲ್ |PC : @sportstarweb

ಪಾಟ್ನಾ : ನಾಯಕ ಮಯಾಂಕ್ ಅಗರ್ವಾಲ್ ಗಳಿಸಿದ 18ನೇ ಪ್ರಥಮ ದರ್ಜೆ ಶತಕದ ನೆರವಿನಿಂದ ಕರ್ನಾಟಕ ಕ್ರಿಕೆಟ್ ತಂಡ ಅತಿಥೇಯ ಬಿಹಾರ ತಂಡದ ವಿರುದ್ಧದ ರಣಜಿ ಟ್ರೋಫಿ ಸಿ ಗುಂಪಿನ ಮೂರನೇ ಸುತ್ತಿನ ಪಂದ್ಯದಲ್ಲಿ ಮುನ್ನಡೆ ಸಾಧಿಸಿದೆ.

ಸೋಮವಾರ ಮೂರನೇ ದಿನದಾಟದಂತ್ಯಕ್ಕೆ ಕರ್ನಾಟಕ ತಂಡ 7 ವಿಕೆಟ್‌ಗಳ ನಷ್ಟಕ್ಕೆ 287 ರನ್ ಗಳಿಸಿದ್ದು, 144 ರನ್ ಮುನ್ನಡೆಯಲ್ಲಿದೆ. ಶ್ರೇಯಸ್ ಗೋಪಾಲ್ (1 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ. ವಿಜಯಕುಮಾರ್ ವೈಶಾಕ್(0) ದಿನದಾಟದಂತ್ಯದಲ್ಲಿ ಹಿಮಾಂಶು ಸಿಂಗ್‌ಗೆ ವಿಕೆಟ್ ಒಪ್ಪಿಸಿದರು.

ಮಯಾಂಕ್ 131 ಎಸೆತಗಳ ಇನಿಂಗ್ಸ್‌ನಲ್ಲಿ 12 ಬೌಂಡರಿ ಗಳಿಸಿ ಹಿಮಾಂಶು ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ಸದ್ಯ ಮೊದಲ ಇನಿಂಗ್ಸ್‌ನಲ್ಲಿ 144 ರನ್ ಮುನ್ನಡೆಯಲ್ಲಿರುವ ಕರ್ನಾಟಕ ತಂಡ ಕನಿಷ್ಠ 3 ಅಂಕವನ್ನು ಖಾತ್ರಿಪಡಿಸಿದೆ.

ಮಳೆಯಿಂದಾಗಿ ರವಿವಾರ 2ನೇ ದಿನದಾಟ ರದ್ದಾಗಿತ್ತು. ಮೂರನೇ ದಿನವಾದ ಸೋಮವಾರ ಪಂದ್ಯವು ತಡವಾಗಿ ಆರಂಭವಾಯಿತು. ಪಂದ್ಯವು ಅಂತಿಮವಾಗಿ ಭೋಜನ ವಿರಾಮದ ನಂತರ ಆರಂಭವಾಯಿತು.

ಕರ್ನಾಟಕದ ಆರಂಭಿಕ ಬ್ಯಾಟರ್‌ಗಳಾದ ಸಂಜಯ್(10 ರನ್) ಹಾಗೂ ನಿಕಿನ್ ಜೋಸ್(16 ರನ್)ತಂಡದ ಮೊತ್ತ 41 ರನ್ ತಲುಪಿದಾಗ ಪೆವಿಲಿಯನ್‌ಗೆ ಸೇರಿಕೊಂಡರು.

ಮಯಾಂಕ್ ಹಾಗೂ ಆರ್. ಸ್ಮರಣ್ (37 ರನ್, 50 ಎಸೆತ)ಮೂರನೇ ವಿಕೆಟ್‌ಗೆ 80 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಸ್ಮರಣ್ ಔಟಾದ ನಂತರ ಮನಿಶ್ ಪಾಂಡೆ(56 ರನ್, 55 ಎಸೆತ, 5 ಬೌಂಡರಿ, 2 ಸಿಕ್ಸರ್)ಜೊತೆ ಕೈಜೋಡಿಸಿದ ಮಯಾಂಕ್ 4ನೇ ವಿಕೆಟ್‌ಗೆ ಬರೋಬ್ಬರಿ 100 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 221ಕ್ಕೆ ತಲುಪಿಸಿದರು.

ಅಭಿನವ್ ಮನೋಹರ್(37 ರನ್, 30 ಎಸೆತ, 6 ಬೌಂಡರಿ, 1 ಸಿಕ್ಸರ್)ಅವರು ಮಯಾಂಕ್ ಜೊತೆಗೆ 5ನೇ ವಿಕೆಟ್‌ಗೆ 65 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಮಯಾಂಕ್ 51ನೇ ಓವರ್‌ನಲ್ಲಿ 105 ರನ್ ಗಳಿಸಿದ್ದಾಗ ಹಿಮಾಂಶು ಸಿಂಗ್‌ಗೆ ವಿಕೆಟ್ ಒಪ್ಪಿಸಿದರು.

ಬಿಹಾರದ ಬೌಲಿಂಗ್ ವಿಭಾಗದಲ್ಲಿ ಹಿಮಾಂಶು ಸಿಂಗ್(4-51)ಯಶಸ್ವಿ ಪ್ರದರ್ಶನ ನೀಡಿದರು. ಸಾಕಿಬ್ ಹುಸೈನ್(2-86) ಹಾಗೂ ವೈಭವ್(1-21)ಮೂರು ವಿಕೆಟ್ ಹಂಚಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News