ಕರುಣ್ ನಾಯರ್, ಅಕ್ಷಯ್ ವಾಡ್ಕರ್ ಅರ್ಧಶತಕ

Update: 2024-03-13 16:15 GMT

ಮುಂಬೈ: ಕರುಣ್ ನಾಯರ್(74 ರನ್, 220 ಎಸೆತ) ಹಾಗೂ ಅಕ್ಷಯ್ ವಾಡ್ಕರ್(ಔಟಾಗದೆ 56, 91 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ವಿದರ್ಭ ಕ್ರಿಕೆಟ್ ತಂಡ ಮುಂಬೈ ವಿರುದ್ಧ ಇಲ್ಲಿ ನಡೆಯುತ್ತಿರುವ ರಣಜಿ ಫೈನಲ್ ಪಂದ್ಯದ ಗೆಲುವಿಗಾಗಿ ತನ್ನ ಹೋರಾಟ ಮುಂದುವರಿಸಿದೆ.

ಗೆಲ್ಲಲು 538 ರನ್ ಗುರಿ ಬೆನ್ನಟ್ಟುತ್ತಿರುವ ವಿದರ್ಭ ಬುಧವಾರ ನಾಲ್ಕನೇ ದಿನದಾಟದಂತ್ಯಕ್ಕೆ 5 ವಿಕೆಟ್ಗಳ ನಷ್ಟಕ್ಕೆ 248 ರನ್ ಗಳಿಸಿದೆ. ಐದನೇ ಹಾಗೂ ಕೊನೆಯ ದಿನವಾದ ಗುರುವಾರ ಗೆಲ್ಲಲು ಇನ್ನೂ 290 ರನ್ ಗಳಿಸುವ ಅಗತ್ಯವಿದೆ. ನಾಯಕ ಅಕ್ಷಯ್ ವಾಡ್ಕರ್(ಔಟಾಗದೆ 56, 91 ಎಸೆತ) ಹಾಗೂ ಹರ್ಷ್ ದುಬೆ(ಔಟಾಗದೆ 11, 10 ಎಸೆತ) 6ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 25 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ವಿದರ್ಭ ತಂಡ ವಿಕೆಟ್ ನಷ್ಟವಿಲ್ಲದೆ 10 ರನ್ನಿಂದ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿತು. ಇನಿಂಗ್ಸ್ ಆರಂಭಿಸಿದ ಅಥರ್ವ ಟೈಡ್ (32 ರನ್, 64 ಎಸೆತ) ಹಾಗೂ ಧ್ರುವ್ ಶೋರೆ(28 ರನ್, 50 ಎಸೆತ)ಮೊದಲ ವಿಕೆಟ್ಗೆ 64 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.

4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕರುಣ್ ನಾಯರ್ ತಾಳ್ಮೆಯ ಇನಿಂಗ್ಸ್( 74 ರನ್, 220 ಎಸೆತ, 3 ಬೌಂಡರಿ) ಆಡಿ ತಂಡದ ಹೋರಾಟಕ್ಕೆ ಶಕ್ತಿ ತುಂಬಿದರು. ಮಾತ್ರವಲ್ಲ ಅಮನ್ ಮೊಖಾಡೆ ( 32 ರನ್, 78 ಎಸೆತ) ಅವರೊಂದಿಗೆ 3ನೇ ವಿಕೆಟ್ಗೆ 54 ರನ್ ಹಾಗೂ ವಾಡ್ಕರ್ ಜೊತೆಗೆ 5ನೇ ವಿಕೆಟ್ಗೆ 90 ರನ್ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದಾರೆ..

ಮುಂಬೈ ಪರ ತನುಷ್ ಕೋಟ್ಯಾನ್ ಹಾಗೂ ಮುಶೀರ್ ಖಾನ್ ತಲಾ ಎರಡು ವಿಕೆಟ್ಗಳನ್ನು ಕಬಳಿಸಿದ್ದಾರೆ. ಶಮ್ಸ್ ಮುಲಾನಿ ಒಂದು ವಿಕೆಟ್ ಪಡೆದಿದ್ದಾರೆ.

3ನೇ ದಿನದಾಟವಾದ ಮಂಗಳವಾರ ಮುಶೀರ್ ಖಾನ್ ಶತಕದ ನೆರವಿನಿಂದ ಮುಂಬೈ ತಂಡ 2ನೇ ಇನಿಂಗ್ಸ್ನಲ್ಲಿ 418 ರನ್ ಗಳಿಸಿತು. ವಿದರ್ಭ ತಂಡಕ್ಕೆ ರಣಜಿ ಫೈನಲ್ ಗೆಲ್ಲಲು 538 ರನ್ ಕಠಿಣ ಗುರಿ ನೀಡಿತು.

ಪಂದ್ಯದ ಮೊದಲ ದಿನದಾಟದಲ್ಲಿ 13 ವಿಕೆಟ್ಗಳು ಪತನಗೊಂಡಾಗ ಪಂದ್ಯವು ಸಂಪೂರ್ಣ ಐದು ದಿನ ನಡೆಯುವ ಕುರಿತು ಸಂಶಯವಿತ್ತು. ಆದರೆ ಕಠಿಣ ಗುರಿ ಬೆನ್ನಟ್ಟುತ್ತಿರುವ ವಿದರ್ಭ ತಂಡ ಕರುಣ್ ನಾಯರ್ ಹಾಗೂ ಅಕ್ಷಯ್ ವಾಡ್ಕರ್ ಅವರ ಹೋರಾಟದ ಸಹಾಯದಿಂದ ಪಂದ್ಯವನ್ನು ಕೊನೆಯ ದಿನವಾದ ಗುರುವಾರಕ್ಕೆ ವಿಸ್ತರಿಸಿದ್ದಾರೆ. ಆದರೆ ಈಗಲೂ ಮುಂಬೈ ತಂಡ 42ನೇ ಬಾರಿ ರಣಜಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಉಳಿದುಕೊಂಡಿದೆ.

ಕೊನೆಯ ದಿನದಾಟದಲ್ಲಿ ವಾಡ್ಕರ್ ತನ್ನ ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆಯೇ ಎಂದು ಗುರುವಾರ ಗೊತ್ತಾಗಲಿದೆ.

ಸಂಕ್ಷಿಪ್ತ ಸ್ಕೋರ್

ಮುಂಬೈ ಮೊದಲ ಇನಿಂಗ್ಸ್: 224 ರನ್

ವಿದರ್ಭ ಮೊದಲ ಇನಿಂಗ್ಸ್: 105 ರನ್

ಮುಂಬೈ ಎರಡನೇ ಇನಿಂಗ್ಸ್: 418 ರನ್

ವಿದರ್ಭ ಎರಡನೇ ಇನಿಂಗ್ಸ್: 248/5

(ಕರುಣ್ ನಾಯರ್ 74, ಅಕ್ಷಯ್ ವಾಡ್ಕರ್ ಔಟಾಗದೆ 56, ಅಥರ್ವ ಟೈಡ್ 32, ಅಮನ್ ಮೊಖಾಡೆ 32, ತನುಷ್ ಕೋಟ್ಯಾನ್ 2-56, ಮುಶೀರ್ ಖಾನ್ 2-38)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News