ಎರಡನೇ ಟೆಸ್ಟ್ ನಲ್ಲಿ ಆರ್.ಅಶ್ವಿನ್ ಬದಲಿಗೆ ರವೀಂದ್ರ ಜಡೇಜಗೆ ಅವಕಾಶ ನೀಡಬೇಕು: ಇರ್ಫಾನ್ ಪಠಾಣ್ ಸಲಹೆ
ಹೊಸದಿಲ್ಲಿ : ಸೆಂಚೂರಿಯನ್ ನಲ್ಲಿ ಗುರುವಾರ ಮೂರನೇ ದಿನಗಳಲ್ಲಿ ಕೊನೆಗೊಂಡಿರುವ ಮೊದಲ ಟೆಸ್ಟ್ ನಲ್ಲಿ ಇನಿಂಗ್ಸ್ ಹಾಗೂ 32 ರನ್ ಅಂತರದಿಂದ ಸೋತಿರುವ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಠಿಣ ಸವಾಲು ಎದುರಿಸುತ್ತಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾವು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 31 ವರ್ಷಗಳ ನಂತರ ಹರಿಣಗಳ ನಾಡಿಯಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕೆಂಬ ಭಾರತದ ಕನಸು ನುಚ್ಚುನೂರಾಗಿದೆ.
ಕೇಪ್ಟೌನ್ ನಲ್ಲಿ ಜನವರಿ 3ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ನಲ್ಲಿ ಭಾರತವು ಜಯ ಸಾಧಿಸಿದರೆ ಸರಣಿಯನ್ನು 1-1ರಿಂದ ಸಮಬಲಗೊಳಿಸುವ ಅವಕಾಶ ಇದೆ.
ಹಿರಿಯ ಬೌಲರ್ ರವಿಚಂದ್ರನ್ ಅಶ್ವಿನ್ ಸ್ಥಾನಕ್ಕೆ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜರನ್ನು ನಾಯಕ ರೋಹಿತ್ ಶರ್ಮಾ ಆಡಿಸಬೇಕು ಎಂದು ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಸಲಹೆ ನೀಡಿದ್ದಾರೆ.
ಚೆನ್ನೈ ಸ್ಪಿನ್ನರ್ ಅಶ್ವಿನ್ ಮೊದಲ ಟೆಸ್ಟ್ ಪಂದ್ಯದಲ್ಲಿ 19 ಓವರ್ ಬೌಲಿಂಗ್ ಮಾಡಿದ್ದು 41 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದಿದ್ದರು.
ರವೀಂದ್ರ ಜಡೇಜ ಫಿಟ್ ಆಗಿದ್ದರೆ ಆಡುವ 11ರ ಬಳಗಕ್ಕೆ ಮರಳಬೇಕು. ವೇಗಿಗಳ ಸ್ನೇಹಿ ಸೆಂಚೂರಿಯನ್ ಪಿಚ್ ನಲ್ಲಿ ಅಶ್ವಿನ್ ಅವರಿಂದ ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಸೆಂಚೂರಿಯನ್ ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ನಾವು ಜಡೇಜರ ಆಟದಿಂದ ವಂಚಿತರಾಗಿದ್ದೆವು ಎಂದು ಪಠಾಣ್ ಸ್ಟಾರ್ ಸ್ಪೋರ್ಟ್ಸ್ ಗೆ ತಿಳಿಸಿದರು.
ಭಾರತದ ಪರ 29 ಟೆಸ್ಟ್, 120 ಏಕದಿನ ಹಾಗೂ 24 ಟಿ-20 ಪಂದ್ಯಗಳನ್ನು ಆಡಿರುವ ಪಠಾಣ್, ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರು ಸಹ ವೇಗಿ ಮುಕೇಶ್ ಕುಮಾರ್ ಗೆ ದಾರಿ ಮಾಡಿಕೊಡಬೇಕು ಎಂದು ಕಿವಿಮಾತು ಹೇಳಿದರು.
ಪ್ರಸಿದ್ಧ ಕೃಷ್ಣ ಸೆಂಚೂರಿಯನ್ ಟೆಸ್ಟ್ ನಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದರು. ತನ್ನ ಮೊದಲ ಪಂದ್ಯದಲ್ಲಿ 19 ಓವರ್ ಗಳಲ್ಲಿ 93 ರನ್ ಬಿಟ್ಟು ಕೊಟ್ಟು ಒಂದು ವಿಕೆಟ್ ಪಡೆದಿದ್ದರು.
ರೋಹಿತ್ ಶರ್ಮಾ ಮೊದಲ ಟೆಸ್ಟ್ ನಲ್ಲಿ ಆಡಿರುವ ಬೌಲಿಂಗ್ ದಾಳಿಯನ್ನು ಬಯಸಿದರೆ ಕೂಡ ಉತ್ತಮವೇ. ಆದರೆ ನೀವು ಆಡುವ ಬಳಗದಲ್ಲಿ ಬದಲಾವಣೆ ಮಾಡಲು ಯೋಚಿಸುತ್ತಿದ್ದರೆ ಪ್ರಸಿದ್ಧ ಕೃಷ್ಣ ಬದಲಿಗೆ ಮುಕೇಶ್ ಕುಮಾರ್ ಬರಬಹುದು. ಆದರೆ ಪ್ರಸಿದ್ಧ ಕೃಷ್ಣ ನೆಟ್ ನಲ್ಲಿ ಆತ್ಮವಿಶ್ವಾಸದಿಂದ ಅಭ್ಯಾಸ ನಡೆಸುತ್ತಿದ್ದರೆ, ಅವರನ್ನು ಎರಡನೇ ಟೆಸ್ಟ್ ನಲ್ಲಿ ಆಡಿಸಬೇಕು ಎಂದು ಪಠಾಣ್ ಅಭಿಪ್ರಾಯಪಟ್ಟರು.