ಆರ್ ಸಿ ಬಿ ಆಟಗಾರರ ಕೈಕುಲುಕದೆ ಬೇಗನೆ ಮೈದಾನ ತೊರೆದ ಧೋನಿ
ಬೆಂಗಳೂರು : ನಾಯಕ ಎಫ್ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಅವರ ಮಹತ್ವದ ಪ್ರದರ್ಶನದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶನಿವಾರ ರಾತ್ರಿ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್ನಿಂದ ಸೋಲಿಸಿ ಪ್ರಸಕ್ತ ಐಪಿಎಲ್ ನ ಕೊನೆಯ ಪ್ಲೇ ಆಫ್ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಸಿ ಎಸ್ ಕೆ ತಂಡದ ಪ್ಲೇ ಆಫ್ ಕನಸು ಭಗ್ನಗೊಂಡ ನಂತರ ಮಾಜಿ ನಾಯಕ ಎಂ.ಎಸ್. ಧೋನಿ ಬೇಗನೆ ಮೈದಾನ ತೊರೆದಿದ್ದಾರೆ. ಪಂದ್ಯದಲ್ಲಿ ಸೋತ ನಂತರ ಆರ್ ಸಿ ಬಿ ಆಟಗಾರರೊಂದಿಗೆ ಕೈಕುಲುಕಲು ಸರದಿ ಸಾಲಿನಲ್ಲಿ ನಿಂತಿದ್ದ ಸಿ ಎಸ್ ಕೆ ಆಟಗಾರರಲ್ಲಿ ಮೊದಲಿಗರಾಗಿದ್ದ ಧೋನಿ ಬೆನ್ನುನೋವಿನ ಸಮಸ್ಯೆಯಿಂದಾಗಿ ಬೇಗನೆ ಮೈದಾನವನ್ನು ತೊರೆದಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ಲೇ ಆಫ್ ಗೆ ಅರ್ಹತೆ ಪಡೆಯಲು ಸಿ ಎಸ್ ಕೆ ವಿಫಲವಾಗಿದ್ದಕ್ಕೆ ಬೇಸರದಲ್ಲಿದ್ದ ಧೋನಿ ಆರ್ ಸಿ ಬಿ ಆಟಗಾರರೊಂದಿಗೆ ಸಾಂಪ್ರದಾಯಿಕ ಹಸ್ತಲಾಘವದಲ್ಲಿ ಭಾಗವಹಿಸದೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದರು.
ಆರ್ ಸಿ ಬಿ ಆಟಗಾರರು ತಮ್ಮ ಸಂಭ್ರಮಾಚರಣೆಯಲ್ಲಿ ಮುಳುಗಿರುವುದನ್ನು ಗಮನಿಸಿದ ಧೋನಿ ಡ್ರೆಸ್ಸಿಂಗ್ ರೂಮ್ ಗೆ ಹಿಂತಿರುಗಲು ನಿರ್ಧರಿಸಿದರು. ಮೈದಾನದಿಂದ ಹೊರಡುವ ಮೊದಲು ಆರ್ ಸಿ ಬಿ ಸಿಬ್ಬಂದಿಯ ಕೈಕುಲುಕಿದರು.
ಸಿ ಎಸ್ ಕೆ ಸ್ಟಾರ್ ಧೋನಿ ಆರ್ ಸಿ ಬಿ ಆಟಗಾರರಿಗೆ ಹಸ್ತಲಾಘವ ಮಾಡದೇ ನಿರ್ಗಮಿಸಿದ ನಂತರ ಕೊಹ್ಲಿ ಅವರು ಧೋನಿಯನ್ನು ಹುಡುಕುತ್ತಿರುವುದು ಕಂಡುಬಂತು.
ಸಿ ಎಸ್ ಕೆಗೆ ಪ್ಲೇ ಆಫ್ ಗೆ ತೇರ್ಗಡೆಯಾಗಲು ಕೊನೆಯ ಓವರ್ನಲ್ಲಿ 17 ರನ್ ಅಗತ್ಯವಿತ್ತು. ವೇಗಿ ಯಶ್ ದಯಾಳ್ ಅವರ ಅಂತಿಮ ಓವರ್ ನ ಮೊದಲ ಎಸೆತವನ್ನು ಧೋನಿ ಸಿಕ್ಸರ್ಗೆ ಅಟ್ಟಿದ್ದರು. ಆದರೆ 2ನೇ ಎಸೆತದಲ್ಲಿ ಔಟಾದರು. ಧೋನಿ ಕೇವಲ 12 ಎಸೆತಗಳಲ್ಲಿ 25 ರನ್ ಗಳಿಸಿ ಗೆಲುವಿಗಾಗಿ ಹೋರಾಡಿದ್ದರು.
ಆರ್ ಸಿ ಬಿ 14 ಅಂಕ ಹಾಗೂ 0.459 ನೆಟ್ ರನ್ ರೇಟ್ನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದು ಗ್ರೂಪ್ ಹಂತ ಮುಕ್ತಾಯಗೊಳಿಸಿದೆ. ಎಲಿಮಿನೇಟರ್ ಸುತ್ತಿನಲ್ಲಿ ಆರ್ ಸಿ ಬಿಯ ಎದುರಾಳಿ ತಂಡ ಯಾವುದೆಂದು ಇನ್ನೂ ನಿರ್ಧಾರವಾಗಿಲ್ಲ.
ಕಳೆದ ವರ್ಷ ಸಿ ಎಸ್ ಕೆ ತಂಡಕ್ಕೆ ದಾಖಲೆಯ 5ನೇ ಐಪಿಎಲ್ ಪ್ರಶಸ್ತಿ ಗೆಲ್ಲಲು ನಾಯಕತ್ವ ವಹಿಸಿದ್ದ 42ರ ಹರೆಯದ ಧೋನಿ ನಿವೃತ್ತಿಯಾಗುತ್ತಾರೆಂದು ನಿರೀಕ್ಷಿಸಲಾಗಿತ್ತು. ಮಂಡಿ ಶಸ್ತ್ರಚಿಕಿತ್ಸೆಯ ನಂತರ ಈ ವರ್ಷದ ಐಪಿಎಲ್ ಗೆ ಮತ್ತೆ ವಾಪಸಾದ ಧೋನಿ ಸಿ ಎಸ್ ಕೆ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್ ಗೆ ಹಸ್ತಾಂತರಿಸಿದ್ದರು. ಅಂತಿಮ ಪ್ಲೇ ಆಫ್ ಸ್ಥಾನ ಪಡೆಯಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್ ಜಯಿಸಿದ್ದ ಗಾಯಕ್ವಾಡ್ ಫೀಲ್ಡಿಂಗ್ ಆಯ್ದುಕೊಂಡಿದ್ದರು.
ಆರ್ ಸಿ ಬಿ 5 ವಿಕೆಟ್ ಗಳ ನಷ್ಟಕ್ಕೆ 218 ರನ್ ಗಳಿಸಿದ್ದರೆ, ಇದಕ್ಕೆ ಉತ್ತರವಾಗಿ ಸಿ ಎಸ್ ಕೆ 7 ವಿಕೆಟ್ ಗಳ ನಷ್ಟಕ್ಕೆ 191 ರನ್ ಗಳಿಸಿತ್ತು. ಉಭಯ ತಂಡಗಳು ತಲಾ 14 ಅಂಕ ಗಳಿಸಿದ್ದರೂ ಉತ್ತಮ ರನ್ ರೇಟ್ ಆಧಾರದಲ್ಲಿ ಆರ್ ಸಿ ಬಿ ಪ್ಲೇ ಆಫ್ ಗೆ ತೇರ್ಗಡೆಯಾಯಿತು.