2ನೇ ದ್ವಿಶತಕ ದಾಖಲಿಸಿದ ಜೈಸ್ವಾಲ್ ಶ್ಲಾಘಿಸಲು ನಿರಾಕರಿಸಿದ ರೋಹಿತ್ ಶರ್ಮಾ

Update: 2024-02-19 16:17 GMT

ರೋಹಿತ್ ಶರ್ಮಾ , ಜೈಸ್ವಾಲ್ | Photo: PTI 

ರಾಜ್ಕೋಟ್: ಸತತ ಟೆಸ್ಟ್ ನಲ್ಲಿ ದ್ವಿಶತಕ ದಾಖಲಿಸಿ ಭಾರತದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿರುವ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ಗೆ ವಿಶ್ವದೆಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. ಆದಾಗ್ಯೂ ಭಾರತದ ನಾಯಕ ರೋಹಿತ್ ಶರ್ಮಾ ಅವರು ಜೈಸ್ವಾಲ್ರನ್ನು ಪ್ರಶಂಸುವುದಕ್ಕೆ ನಿರಾಕರಿಸಿದರು.

ನಾನು ಅವರ ಬಗ್ಗೆ ಸಾಕಷ್ಟು ಮಾತನಾಡಿದ್ದೇನೆ. ಡ್ರೆಸ್ಸಿಂಗ್ ರೂಮ್ ನ ಹೊರಗಿನ ಜನರು ಕೂಡ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಜೈಸ್ವಾಲ್ ಕುರಿತಂತೆ ಶಾಂತವಾಗಿರಲು ಬಯಸುತ್ತೇನೆ. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಜೈಸ್ವಾಲ್ ತನ್ನ ವೃತ್ತಿಜೀವನವನ್ನು ಉನ್ನತ ಮಟ್ಟದಲ್ಲಿ ಆರಂಭಿಸಿದ್ದಾರೆ ಎಂದು ಪಂದ್ಯ ನಂತರದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಹೇಳಿದ್ದಾರೆ.

ಭಾರತೀಯ ತಂಡದ ಪರ 3ನೇ ಟೆಸ್ಟ್ ಪಂದ್ಯದಲ್ಲಿ ಸರ್ಫರಾಝ್ ಖಾನ್ ಹಾಗೂ ಧ್ರುವ್ ಜುರೆಲ್ ಚೊಚ್ಚಲ ಪಂದ್ಯವನ್ನಾಡಿದ್ದರು. ಈ ಇಬ್ಬರು ಅತ್ಯುತ್ತಮ ಪ್ರದರ್ಶನದಿಂದ ಎಲ್ಲರ ಮನ ಗೆದ್ದಿದ್ದಾರೆ.

ನಿಸ್ಸಂಶಯವಾಗಿ ಇಂತಹ ಪಂದ್ಯವನ್ನು ಗೆಲ್ಲುವುದು ತುಂಬಾ ಒಳ್ಳೆಯ ವಿಚಾರ. ವಿಶೇಷವಾಗಿ ಇಂತಹ ಯುವ ತಂಡ ಈ ಸಾಧನೆ ಮಾಡಿದೆ. ನಮ್ಮ ತಂಡದಲ್ಲಿ ಇಬ್ಬರು(ಸರ್ಫರಾಝ್ ಹಾಗೂ ಧ್ರುವ್)ಚೊಚ್ಚಲ ಪಂದ್ಯ ಆಡಿದ್ದರು. ಆಡುವ 11ರ ಬಳಗದಲ್ಲಿ ಅನುಭವಿ ಆಟಗಾರರ ಸಂಖ್ಯೆ ಕಡಿಮೆ ಇತ್ತು. ಈ ಎಲ್ಲ ಆಟಗಾರರು ಸಾಕಷ್ಟು ಅನುಭವ ಪಡೆದಿದ್ದಾರೆ. ನಮ್ಮ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ನಾವು ಕಠಿಣ ಶ್ರಮಪಟ್ಟದ್ದೇವೆ. ಈ ಯುವ ಆಟಗಾರರಿಗೆ ಎಲ್ಲ ಶ್ರೇಯಸ್ಸು ಸಲ್ಲಬೇಕಾಗಿದೆ ಎಂದು ರೋಹಿತ್ ಹೇಳಿದ್ದಾರೆ.

ಭಾರತವು ರವಿವಾರ ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯವನ್ನು 434 ರನ್ ಅಂತರದಿಂದ ಗೆದ್ದುಕೊಂಡಿತ್ತು. ಇದು ರನ್ ಅಂತರದಲ್ಲಿ ಭಾರತ ದಾಖಲಿಸಿರುವ ಅತಿದೊಡ್ಡ ಗೆಲುವಾಗಿದೆ. ಆತಿಥೇಯರು 4ನೇ ದಿನವಾದ ರವಿವಾರ ಇಂಗ್ಲೆಂಡ್ ಗೆಲುವಿಗೆ 557 ರನ್ ಗುರಿ ನೀಡಿದ್ದರು. ಗುರಿ ನೋಡಿಯೇ ಮೂರ್ಛೆ ಹೋದ ಇಂಗ್ಲೆಂಡ್ ತನ್ನ 2ನೇ ಇನಿಂಗ್ಸ್ ನಲ್ಲಿ 122 ರನ್ ಗೆ ಆಲೌಟಾಯಿತು. ಯಶಸ್ವಿ ಜೈಸ್ವಾಲ್ 3ನೇ ಟೆಸ್ಟ್ ನ 2ನೇ ಇನಿಂಗ್ಸ್ ನಲ್ಲಿ 236 ಎಸೆತಗಳಲ್ಲಿ ಔಟಾಗದೆ 214 ರನ್ ಗಳಿಸಿ ತಂಡದ ಗೆಲುವಿನಲ್ಲಿ ಗಮನಾರ್ಹ ಕಾಣಿಕೆ ನೀಡಿದರು. ಜೈಸ್ವಾಲ್ ಇನಿಂಗ್ಸ್ ನಲ್ಲಿ 14 ಬೌಂಡರಿ ಹಾಗೂ 12 ಸಿಕ್ಸರ್ಗಳಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News