ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ | ಚೆನ್ನೈಗೆ ಆಗಮಿಸಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ಹೊಸದಿಲ್ಲಿ : ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಸೆಪ್ಟಂಬರ್ 19ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಲು ಚೆನ್ನೈಗೆ ಆಗಮಿಸಿದ್ದಾರೆ.
ಹಳದಿ ಜರ್ಸಿ ಧರಿಸಿದ್ದ ರೋಹಿತ್ ಗುರುವಾರ ರಾತ್ರಿ ಏರ್‌ಪೋರ್ಟ್‌ನಲ್ಲಿ ಭದ್ರತಾ ಸಿಬ್ಬಂದಿಯ ಬೆಂಗಾವಲಿನಲ್ಲಿ ಹೊರ ಬರುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಕೊಹ್ಲಿ ಅವರು ವಿಮಾನದಲ್ಲಿ ಬೆಳಗ್ಗಿನ ಜಾವ ಲಂಡನ್‌ನಿಂದ ಚೆನ್ನೈಗೆ ಬಂದಿಳಿದಿದ್ದಾರೆ.
ಭಾರತದ ವೇಗಿ ಜಸ್‌ಪ್ರಿತ್ ಬುಮ್ರಾ, ಕೆ.ಎಲ್.ರಾಹುಲ್ ಹಾಗೂ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಗುರುವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ್ದಾರೆ.
ಆಟಗಾರರು ಒಂದು ತಿಂಗಳ ವಿರಾಮದ ನಂತರ ಮೈದಾನಕ್ಕೆ ಮರಳುತ್ತಿದ್ದಾರೆ. ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಸೋಲಿನ ಕಹಿ ಘಟನೆಯನ್ನು ಮರೆತು, ನೂತನ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದ್ದಾರೆ.
ಗಂಭೀರ್ ಹಾಗೂ ಅವರ ಹೊಸ ಸಹಾಯಕ ಸಿಬ್ಬಂದಿಯಡಿ ಭಾರತ ಕ್ರಿಕೆಟ್ ತಂಡವು ಇದೇ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಆಡಲಿದೆ. ಪಾಕಿಸ್ತಾನ ವಿರುದ್ಧ ಇತ್ತೀಚೆಗೆ 2-0 ಅಂತರದಿಂದ ಟೆಸ್ಟ್ ಸರಣಿಯನ್ನು ಜಯಿಸಿರುವ ಬಾಂಗ್ಲಾದೇಶ ವಿರುದ್ಧ ರೋಹಿತ್ ಬಳಗ ಹೇಗೆ ಸವಾರಿ ನಡೆಸಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.
ಭಾರತ-ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯವು ಸೆಪ್ಟಂಬರ್ 27ರಿಂದ ಕಾನ್ಪುರದಲ್ಲಿ ಆರಂಭವಾಗಲಿದೆ.