ಏಕದಿನ ರ್ಯಾಂಕಿಂಗ್: ಶುಭಮನ್ ಗಿಲ್ ಜೀವನಶ್ರೇಷ್ಠ ಸಾಧನೆ
Rohit Sharma, Virat Kohli in top-10
ಹೊಸದಿಲ್ಲಿ : ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಬುಧವಾರ ಬಿಡುಗಡೆಯಾದ ಐಸಿಸಿ ಪುರುಷರ ಏಕದಿನ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ತಲುಪುವ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ಸದ್ಯ ಭಾರತದ ಮೂವರು ಬ್ಯಾಟರ್‌ಗಳು ಅಗ್ರ ರ್ಯಾಂಕಿನಲ್ಲಿದ್ದು, ಈ ಪೈಕಿ ಗಿಲ್ ಅಗ್ರ ರ್ಯಾಂಕಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಅಗ್ರ-10ರಲ್ಲಿರುವ ಭಾರತದ ಇನ್ನಿಬ್ಬರು ಆಟಗಾರರೆಂದರೆ: ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ . ರೋಹಿತ್ 8ನೇ ಸ್ಥಾನ ಪಡೆದರೆ, ವಿರಾಟ್ ಕೊಹ್ಲಿ 9ನೇ ಸ್ಥಾನದಲ್ಲಿದ್ದಾರೆ.
2019ರ ಜನವರಿಯಲ್ಲಿ ಕೊನೆಯ ಬಾರಿ ಏಕದಿನ ರ್ಯಾಂಕಿಂಗ್‌ನಲ್ಲಿ ಭಾರತದ ಮೂವರು ಬ್ಯಾಟರ್‌ಗಳು ಅಗ್ರ-10ರಲ್ಲಿ ಸ್ಥಾನ ಪಡೆದಿದ್ದರು. ಆಗ ರೋಹಿತ್, ಕೊಹ್ಲಿ ಹಾಗೂ ಶಿಖರ್ ಧವನ್ ಅಗ್ರ-10ರಲ್ಲಿದ್ದರು.
ಗಿಲ್ ರ್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಮೇಲಕ್ಕೇರಿದ್ದು ಪಾಕಿಸ್ತಾನ ವಿರುದ್ಧ ಏಶ್ಯಕಪ್ ಪಂದ್ಯದಲ್ಲಿ 58 ರನ್ ಗಳಿಸಿದ್ದಲ್ಲದೆ ರೋಹಿತ್ ಜೊತೆಗೆ 121 ರನ್ ಜೊತೆಯಾಟ ನಡೆಸಿ ನಿರ್ಣಾಯಕ ಪಾತ್ರವಹಿಸಿದ್ದರು.
ಇದೇ ವೇಳೆ, ಪ್ರಸಕ್ತ ಏಶ್ಯಕಪ್‌ನಲ್ಲಿ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿರುವ ರೋಹಿತ್ ಹಾಗೂ ಪಾಕಿಸ್ತಾನದ ವಿರುದ್ಧ ಔಟಾಗದೆ 122 ರನ್ ಗಳಿಸಿರುವ ಕೊಹ್ಲಿ ರ್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಮೇಲಕ್ಕೇರಿದ್ದಾರೆ.
ಪಾಕಿಸ್ತಾನದ ಮೂವರು ಬ್ಯಾಟರ್‌ಗಳು ಕೂಡ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನ ವಿಶ್ವಕಪ್ ಆರಂಭವಾಗುವ ಕೆಲವೇ ದಿನಗಳ ಮೊದಲು ಈ ಸಾಧನೆ ಮಾಡಿದ್ದಾರೆ.
ಪಾಕ್ ನಾಯಕ ಬಾಬರ್ ಆಝಂ ಅವರು 2ನೇ ಸ್ಥಾನದಲ್ಲಿರುವ ಗಿಲ್‌ಗಿಂತ 100ಕ್ಕೂ ಅಧಿಕ ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ರ್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇಮಾಮುಲ್‌ಹಕ್ ಹಾಗೂ ಫಖರ್ ಝಮಾನ್ ಕ್ರಮವಾಗಿ 5ನೇ ಹಾಗೂ 10ನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯದ ಆಟಗಾರರಾದ ಡೇವಿಡ್ ವಾರ್ನರ್(1 ಸ್ಥಾನ ಮೇಲಕ್ಕೇರಿ 4ನೇ), ಟ್ರಾವಿಸ್ ಹೆಡ್(6 ಸ್ಥಾನ ಮೇಲಕ್ಕೇರಿ 20ನೇ) ಹಾಗೂ ಮಾರ್ನಸ್ ಲ್ಯಾಬುಶೇನ್(24 ಸ್ಥಾನ ಭಡ್ತಿ ಪಡೆದು 45ನೇ ಸ್ಥಾನ), ಭಾರತದ ಜೋಡಿ ಕೆ.ಎಲ್.ರಾಹುಲ್(10 ಸ್ಥಾನ ಭಡ್ತಿ ಪಡೆದು 37ನೇ ಸ್ಥಾನ) ಹಾಗೂ ಇಶಾನ್ ಕಿಶನ್(2 ಸ್ಥಾನ ಭಡ್ತಿ ಪಡೆದು 22ನೇ ಸ್ಥಾನ)ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ.
ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ನ್ಯೂಝಿಲ್ಯಾಂಡ್‌ನ ಟ್ರೆಂಟ್ ಬೌಲ್ಟ್ ಜಂಟಿ 2ನೇ ಸ್ಥಾನ ಪಡೆದರೆ, ಆಸ್ಟ್ರೇಲಿಯದ ಲೆಗ್ ಸ್ಪಿನ್ನರ್ ಆ್ಯಡಮ್ ಝಾಂಪ ಮೊದಲ ಬಾರಿ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಮೊದಲ ಬಾರಿ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ 5 ಸ್ಥಾನ ಮೇಲಕ್ಕೇರಿ 7ನೇ ಸ್ಥಾನ ಪಡೆದಿದ್ದಾರೆ. ಯಾದವ್ ಏಶ್ಯಕಪ್‌ನಲ್ಲಿ ಆಡಿರುವ 2 ಪಂದ್ಯಗಳಲ್ಲಿ ಒಟ್ಟು 9 ವಿಕೆಟ್‌ಗಳನ್ನು ಬಾಚಿಕೊಂಡಿದ್ದಾರೆ.
ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ(8 ಸ್ಥಾನ ಭಡ್ತಿ ಪಡೆದು 27ನೇ ಸ್ಥಾನ) ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(21 ಸ್ಥಾನ ಮೇಲಕ್ಕೇರಿ 56ನೇ ರ್ಯಾಂಕ್)ಹೆಚ್ಚಿನ ಸ್ಥಾನ ಭಡ್ತಿ ಪಡೆದಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 4 ಸ್ಥಾನ ಮೇಲಕ್ಕೇರಿರುವ ಪಾಂಡ್ಯ 6ನೇ ಸ್ಥಾನದಲ್ಲಿದ್ದಾರೆ.