ಉತ್ತಮ ಫಾರ್ಮ್‌ನಲ್ಲಿಲ್ಲದ ರೋಹಿತ್ ಮಧ್ಯಮ ಕ್ರಮಾಂಕದಲ್ಲೇ ಮುಂದುವರಿಯಬೇಕು: ಹರ್ಭಜನ್ ಸಿಂಗ್
ಹೊಸದಿಲ್ಲಿ: ಸದ್ಯ ಬ್ಯಾಟಿಂಗ್‌ನಲ್ಲಿ ಕಳಪೆ ಫಾರ್ಮ್‌ನಲ್ಲಿರುವ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯ ವಿರುದ್ಧ ಬ್ರಿಸ್ಬೇನ್‌ನಲ್ಲಿ ಶನಿವಾರದಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಮುಂದುವರಿಸಬೇಕು ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸಲಹೆ ನೀಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಿಂದ ವಂಚಿತರಾಗಿ, ಅಡಿಲೇಡ್‌ನಲ್ಲಿ ನಡೆದಿರುವ 2ನೇ ಟೆಸ್ಟ್ ಪಂದ್ಯಕ್ಕೆ ವಾಪಸಾಗಿದ್ದ ರೋಹಿತ್ ಅವರು 2 ಇನಿಂಗ್ಸ್‌ಗಳಲ್ಲಿ ಕೇವಲ 9 ರನ್ ಗಳಿಸಿದ್ದರು. ಈ ಪಂದ್ಯವನ್ನು ಭಾರತ ತಂಡವು 10 ವಿಕೆಟ್‌ಗಳಿಂದ ಸೋತಿತ್ತು.
2ನೇ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಅವರು ಭಾರತದ ಇನಿಂಗ್ಸ್ ಆರಂಭಿಸಿದ್ದರು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ರೋಹಿತ್ ಅವರು ಫ್ಲಾಫ್ ಶೋ ನೀಡಿದ್ದರು.
2ನೇ ಪಂದ್ಯದಲ್ಲಿ ಸೋತ ಹೊರತಾಗಿಯೂ ಟೀಮ್ ಮ್ಯಾನೇಜ್‌ಮೆಂಟ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಸರದಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಹರ್ಭಜನ್ ಸಿಂಗ್ ಆಗ್ರಹಿಸಿದರು.
ಬ್ಯಾಟಿಂಗ್ ಸರದಿಯಲ್ಲಿ ಯಾವುದೇ ಬದಲಾವಣೆಯಾಗಬಹುದು ಎಂದು ನನಗನಿಸುತ್ತಿಲ್ಲ. ರೋಹಿತ್ ಶರ್ಮಾರನ್ನು ಅಗ್ರ ಸರದಿಯಲ್ಲಿ ಆಡಿಸಬೇಕೆಂಬ ಚರ್ಚೆ ನಡೆದಿದೆ. ಸುನೀಲ್ ಗವಾಸ್ಕರ್ ಕೂಡ ಇದೇ ರೀತಿಯ ಸಲಹೆ ನೀಡಿದ್ದಾರೆ. ಆದರೆ ನನ್ನ ಪ್ರಕಾರ ಟೀಮ್ ಮ್ಯಾನೇಜ್‌ಮೆಂಟ್ ಆ ರೀತಿ ಯೋಚಿಸದು. ರೋಹಿತ್ ಸದ್ಯ ಶ್ರೇಷ್ಠ ಫಾರ್ಮ್‌ನಲ್ಲಿಲ್ಲ. ಹೀಗಾಗಿ ಅವರನ್ನು ಏಕೆ ಅಗ್ರ ಸರದಿಯಲ್ಲಿ ಆಡಿಸಬೇಕು? ಕೆ.ಎಲ್.ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸುವುದನ್ನು ಹಾಗೂ ರೋಹಿತ್ ಶರ್ಮಾ ಮಧ್ಯಮ ಸರದಿಯಲ್ಲಿ ಆಡುವುದನ್ನು ಮುಂದುವರಿಸಬೇಕು ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ಹರ್ಭಜನ್ ತಿಳಿಸಿದ್ದಾರೆ.
ಪಿಎಂ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯ ಸೇರಿದಂತೆ ಹಿಂದಿನ 5 ಪಂದ್ಯಗಳಲ್ಲಿ ರೋಹಿತ್ ಅವರು ಆರು ಬಾರಿ ಒಂದಂಕಿ ಸ್ಕೋರ್ ಗಳಿಸಿದ್ದಾರೆ. ಒಂದು ಬಾರಿ ಮಾತ್ರ ಅರ್ಧಶತಕ ಗಳಿಸಿದ್ದಾರೆ. ಅಡಿಲೇಡ್ ಟೆಸ್ಟ್‌ನಲ್ಲಿ ರೋಹಿತ್ ಅವರು ಮಧ್ಯಮ ಸರದಿಯಲ್ಲಿ ಬ್ಯಾಟಿಂಗ್ ಮಾಡಿ 3 ಹಾಗೂ 6 ರನ್ ಗಳಿಸಿದ್ದರು. ಎರಡೂ ಇನಿಂಗ್ಸ್‌ಗಳಲ್ಲಿ ಭಾರತ ತಂಡವು ಬ್ಯಾಟಿಂಗ್ ವೈಫಲ್ಯ ಕಂಡಿತ್ತು.
ಬ್ರಿಸ್ಬೇನ್ ಟೆಸ್ಟ್‌ಗೆ ವಾಶಿಂಗ್ಟನ್ ಸುಂದರ್ ಪುನರಾಗಮನ ಮಾಡಬಹುದು. ಅಶ್ವಿನ್ ಅವರು ಅಡಿಲೇಡ್‌ನಲ್ಲಿ ಹೆಚ್ಚು ಬೌಲಿಂಗ್ ಮಾಡಿದ್ದರು. ಆದರೆ ದೊಡ್ಡ ಪ್ರಭಾವ ಬೀರಲಿಲ್ಲ. ಮತ್ತೊಂದೆಡೆ ಸುಂದರ್ ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡುತ್ತಿದ್ದಾರೆ. ಪರ್ತ್ ಟೆಸ್ಟ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಎರಡು ನಿರ್ಣಾಯಕ ವಿಕೆಟ್‌ಗಳನ್ನು ಪಡೆದಿದ್ದರು ಎಂದು ಹರ್ಭಜನ್ ಹೇಳಿದ್ದಾರೆ.