ಐಸಿಸಿ ಏಕದಿನ ವಿಶ್ವಕಪ್ 2023ರ ಜಾಗತಿಕ ರಾಯಭಾರಿಯಾಗಿ ಸಚಿನ್ ತೆಂಡೂಲ್ಕರ್ ಆಯ್ಕೆ
ಹೊಸದಿಲ್ಲಿ: ಗುರುವಾರದಿಂದ ಅಹಮದಾಬಾದ್ ನಲ್ಲಿ ಪ್ರಾರಂಭವಾಗಲಿರುವ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ನ ಜಾಗತಿಕ ರಾಯಭಾರಿಯನ್ನಾಗಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರನ್ನು ಐಸಿಸಿ ಆಯ್ಕೆ ಮಾಡಿದೆ. ತಮ್ಮ ವೈಭವಯುತ ಕ್ರಿಕೆಟ್ ಜೀವನದಲ್ಲಿ ಆರು ವಿಶ್ವಕಪ್ ಅರ್ಧ ಶತಕಗಳನ್ನು ಗಳಿಸಿರುವ ಸಚಿನ್ ತೆಂಡೂಲ್ಕರ್, ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವೆ ಪ್ರಾರಂಭವಾಗಲಿರುವ ಆರಂಭಿಕ ಪಂದ್ಯಕ್ಕೂ ಮುನ್ನ ವಿಶ್ವಕಪ್ ಟ್ರೋಫಿಯೊಂದಿಗೆ ಮೈದಾನವನ್ನು ಪ್ರವೇಶಿಸುವ ಮೂಲಕ ವಿಶ್ವಕಪ್ ಕ್ರೀಡಾಕೂಟ ಪ್ರಾರಂಭವಾಗಿದೆ ಎಂದು ಸಾಂಕೇತಿಕವಾಗಿ ಪ್ರಚುರಪಡಿಸಲಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿನ್ ತೆಂಡೂಲ್ಕರ್, “1987ರ ವಿಶ್ವಕಪ್ ನಲ್ಲಿ ಬಾಲ್ ಬಾಯ್ ಆಗಿದ್ದ ನಾನು, ದೇಶವನ್ನು ಆರು ವಿಶ್ವಕಪ್ ಆವೃತ್ತಿಗಳಲ್ಲಿ ಪ್ರತಿನಿಧಿಸಿರುವುದರಿಂದ, ವಿಶ್ವಕಪ್ ಗಳಿಗೆ ನನ್ನ ಹೃದಯದಲ್ಲಿ ಎಂದಿಗೂ ವಿಶೇಷ ಸ್ಥಾನವಿದೆ. 2011ರಲ್ಲಿ ವಿಶ್ವಕಪ್ ಜಯಿಸಿದ್ದು ನನ್ನ ಕ್ರಿಕೆಟ್ ಪಯಣದಲ್ಲಿನ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಹಲವಾರು ವಿಶೇಷ ತಂಡಗಳು ಹಾಗೂ ಆಟಗಾರರು ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಕಠಿಣವಾಗಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಈ ಅದ್ಭುತ ಕ್ರೀಡಾಕೂಟವನ್ನು ನಾನು ರೋಮಾಂಚನದಿಂದ ಎದುರು ನೋಡುತ್ತಿದ್ದೇನೆ. ವಿಶ್ವಕಪ್ ನಂಥ ಮೈಲಿಗಲ್ಲು ಕ್ರೀಡಾಕೂಟಗಳು ಯುವಕರ ಮನಸ್ಸಿನಲ್ಲಿ ಕನಸುಗಳನ್ನು ಬಿತ್ತುತ್ತವೆ. ಈ ಬಾರಿಯ ವಿಶ್ವಕಪ್ ಆವೃತ್ತಿಯೂ ಯುವತಿಯರು ಹಾಗೂ ಯುವಕರಲ್ಲಿ ಕ್ರೀಡೆಯನ್ನು ಆಯ್ದುಕೊಳ್ಳಲು ಸ್ಫೂರ್ತಿಯಾಗಲಿ ಹಾಗೂ ಉನ್ನತ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಂತಾಗಲಿ” ಎಂದು ಸಚಿನ್ ತೆಂಡೂಲ್ಕರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಹಾರೈಸಿದ್ದಾರೆ.
ಈ ಬಾರಿಯ ವಿಶ್ವಕಪ್ ಕ್ರೀಡಾಕೂಟಕ್ಕೆ ದಿಗ್ಗಜ ಕ್ರಿಕೆಟಿಗರಾದ ವೆಸ್ಟ್ ಇಂಡೀಸ್ ನ ವಿವಿಯನ್ ರಿಚರ್ಡ್ಸ್, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್, ವಿಶ್ವಕಪ್ ಜಯಿಸಿದ ಇಂಗ್ಲೆಂಡ್ ತಂಡದ ನಾಯಕರಾಗಿದ್ದ ಇಯಾನ್ ಮಾರ್ಗನ್, ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್, ನ್ಯೂಝಿಲೆಂಡ್ ನ ರಾಸ್ ಟೇಲರ್, ಭಾರತದ ಸುರೇಶ್ ರೈನಾ, ಮಹಿಳಾ ಭಾರತೀಯ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಹಾಗೂ ಪಾಕಿಸ್ತಾನದ ಆಲ್ ರೌಂಡರ್ ಮುಹಮ್ಮದ್ ಹಫೀಝ್ ಸಾಕ್ಷಿಯಾಗಲಿದ್ದಾರೆ.