ಎರಡನೇ ಟೆಸ್ಟ್ : ಪ್ರಭಾತ್ ಜಯಸೂರ್ಯಗೆ 6 ವಿಕೆಟ್, ಕಿವೀಸ್ 88 ರನ್‌ಗೆ ಆಲೌಟ್
ಗಾಲೆ: ಸ್ಪಿನ್ನರ್ ಪ್ರಭಾತ್ ಜಯಸೂರ್ಯ(6-42)ಗಳಿಸಿದ 9ನೇ ಐದು ವಿಕೆಟ್ ಗೊಂಚಲು ನೆರವಿನಿಂದ ಆತಿಥೇಯ ಶ್ರೀಲಂಕಾ ಕ್ರಿಕೆಟ್ ತಂಡವು ನ್ಯೂಝಿಲ್ಯಾಂಡ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 88 ರನ್‌ಗೆ ಆಲೌಟ್ ಮಾಡಿತು.
ಶ್ರೀಲಂಕಾದ ಮೊದಲ ಇನಿಂಗ್ಸ್ 5 ವಿಕೆಟ್‌ಗಳ ನಷ್ಟಕ್ಕೆ 602 ರನ್‌ಗೆ ಉತ್ತರವಾಗಿ ಕನಿಷ್ಠ ಮೊತ್ತಕ್ಕೆ ಸರ್ವಪತನಗೊಂಡಿರುವ ಕಿವೀಸ್‌ಗೆ ಲಂಕಾದ ನಾಯಕ ಧನಂಜಯ ಡಿಸಿಲ್ವ ಫಾಲೋ ಆನ್ ಹೇರಿದರು.
ಎರಡನೇ ಇನಿಂಗ್ಸ್ ಆರಂಭಿಸಿರುವ ನ್ಯೂಝಿಲ್ಯಾಂಡ್ ತಂಡ ಶನಿವಾರ ಮೂರನೇ ದಿನದಾಟದಂತ್ಯಕ್ಕೆ 199 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಲಂಕಾ ವಿರುದ್ಧ ಇನಿಂಗ್ಸ್ ಸೋಲಿನಿಂದ ಪಾರಾಗಲು ಇನ್ನೂ 315 ರನ್ ಗಳಿಸಬೇಕಾಗಿದೆ.
ನ್ಯೂಝಿಲ್ಯಾಂಡ್ ಪರ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ(61 ರನ್, 62 ಎಸೆತ) ಅರ್ಧಶತಕ ಗಳಿಸಿದ್ದು, ಟಾಮ್ ಬ್ಲೆಂಡೆಲ್(ಔಟಾಗದೆ 47 ರನ್)ಹಾಗೂ ಗ್ಲೆನ್ ಫಿಲಿಪ್ಸ್(ಔಟಾಗದೆ 32) ಕ್ರೀಸ್ ಕಾಯ್ದುಕೊಂಡಿದ್ದಾರೆ.
2ನೇ ಇನಿಂಗ್ಸ್‌ನಲ್ಲಿ ಲಂಕಾದ ಪರ ನಿಶಾನ್ ಪೆರಿಸ್(3-91) ಯಶಸ್ವಿ ಪ್ರದರ್ಶನ ನೀಡಿದರು. ಧನಂಜಯ ಡಿ ಸಿಲ್ವ(1-17) ಹಾಗೂ ಪ್ರಭಾತ್ ಜಯಸೂರ್ಯ(1-76)ತಲಾ ಒಂದು ವಿಕೆಟ್‌ಗಳನ್ನು ಪಡೆದರು.
ಇದಕ್ಕೂ ಮೊದಲು 2 ವಿಕೆಟ್‌ಗಳ ನಷ್ಟಕ್ಕೆ 22 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ನ್ಯೂಝಿಲ್ಯಾಂಡ್ ತಂಡವು ಯಾವ ಹಂತದಲ್ಲೂ ಹೋರಾಟವನ್ನೇ ನೀಡದೆ ಜಯಸೂರ್ಯ ಅವರ ಸ್ಪಿನ್ ಮೋಡಿಗೆ ತತ್ತರಿಸಿ 39.5 ಓವರ್‌ಗಳಲ್ಲಿ ಕೇವಲ 88 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಮೂರು ವಿಕೆಟ್‌ಗಳನ್ನು ಕಬಳಿಸಿದ ನಿಶಾನ್ ಪೆರಿಸ್(3-33) ಜಯಸೂರ್ಯಗೆ ಸಾಥ್ ನೀಡಿದರು.
ಮಿಚೆಲ್ ಸ್ಯಾಂಟ್ನರ್(29 ರನ್)ಹಾಗೂ ವಿಲಿಯಮ್ ಓ ರೂರ್ಕಿ(2) ಕೊನೆಯ ವಿಕೆಟ್‌ನಲ್ಲಿ ಗರಿಷ್ಠ ಜೊತೆಯಾಟ ನಡೆಸಿದರು. ಹಿರಿಯ ಬ್ಯಾಟರ್ ಕೇನ್ ವಿಲಿಯಮ್ಸನ್ ಶ್ರೀಲಂಕಾದ ಬಲಿಷ್ಠ ಸ್ಪಿನ್ ದಾಳಿಗೆ ನಿರುತ್ತರವಾದರು. ಜಯಸೂರ್ಯ ಅವರು ವಿಲಿಯಮ್ಸನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.
ನ್ಯೂಝಿಲ್ಯಾಂಡ್ ಪರ ಮಿಚೆಲ್ ಸ್ಯಾಂಟ್ನರ್(29 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.
ನಾಯಕ ಧನಂಜಯ ಡಿಸಿಲ್ವ ಮೊದಲ ಸ್ಲಿಪ್‌ನಲ್ಲಿ ಐದು ಕ್ಯಾಚ್‌ಗಳನ್ನು ಪಡೆದು ಇತರ 15 ಆಟಗಾರರೊಂದಿಗೆ ದಾಖಲೆ ಹಂಚಿಕೊಂಡರು.
ಆರಂಭಿಕ ಬ್ಯಾಟರ್ ಟಾಮ್ ಲ್ಯಾಥಮ್(2 ರನ್, 0)ಎರಡೂ ಇನಿಂಗ್ಸ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದರು. 2ನೇ ಇನಿಂಗ್ಸ್‌ನಲ್ಲೂ ರನ್ ಗಳಿಸದೆ ನಿಶಾನ್ ಪೆರಿಸ್‌ಗೆ ವಿಕೆಟ್ ಒಪ್ಪಿಸಿದರು.
2ನೇ ಟೆಸ್ಟ್‌ಗಿಂತ ಮೊದಲು 15 ಪಂದ್ಯಗಳಲ್ಲಿ 88 ವಿಕೆಟ್‌ಗಳನ್ನು ಕಬಳಿಸಿದ್ದ ಜಯಸೂರ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಪೂರೈಸಿದ ದಾಖಲೆಯನ್ನು ಸರಿಗಟ್ಟಲು ಕೇವಲ 6 ವಿಕೆಟ್ ಅಗತ್ಯವಿದೆ. 1896ರಿಂದ ಈ ದಾಖಲೆ ಉಳಿದುಕೊಂಡಿದ್ದು, ಜಾರ್ಜ್ ಲೋಹ್ಮನ್ ತನ್ನ 16ನೇ ಟೆಸ್ಟ್ ಪಂದ್ಯದಲ್ಲಿ 100 ವಿಕೆಟ್‌ಗಳನ್ನು ತಲುಪಿದ್ದರು.