ದ್ವಿತೀಯ ಟೆಸ್ಟ್: ಮೊದಲ ದಿನದಾಟಕ್ಕೆ ಮಳೆ ಅಡ್ಡಿ

Update: 2024-09-27 16:32 GMT

PC: PTI

ಕಾನ್ಪುರ : ಭಾರತ ಹಾಗೂ ಬಾಂಗ್ಲಾದೇಶ ನಡುವೆ ಶುಕ್ರವಾರ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮಂದಬೆಳಕು ಹಾಗೂ ಭಾರೀ ಮಳೆ ಅಡ್ಡಿಯಾಗಿದೆ. ಮೊದಲ ದಿನದಾಟವು ಟೀ ವಿರಾಮಕ್ಕೆ ಮೊದಲೇ ಕೊನೆಗೊಂಡಿದ್ದು, ಪ್ರವಾಸಿ ಬಾಂಗ್ಲಾದೇಶ ತಂಡವು 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ.

ಕಪ್ಪು ಮೋಡದಿಂದಾಗಿ ಗೋಚರತೆ ಕಡಿಮೆಯಾಗಿದ್ದು, ಭೋಜನ ವಿರಾಮದ ನಂತರ ಅಂಪೈರ್‌ಗಳು ಆಟಗಾರರನ್ನು ಮೈದಾನದಿಂದ ಹೊರಗೆ ಕರೆದೊಯ್ದರು.

ದಿನದಾಟದಂತ್ಯಕ್ಕೆ ಮೂಮಿನುಲ್ ಹಕ್(40 ರನ್)ಹಾಗೂ ಮುಶ್ಫಿಕುರ‌್ರಹೀಂ(6 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ.

ಗುರುವಾರ ಅಂತರ್‌ರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಪ್ರಕಟಿಸಿರುವ ಬಾಂಗ್ಲಾದೇಶದ ಮಾಜಿ ನಾಯಕ ಶಾಕಿಬ್ ಅಲ್ ಹಸನ್ ಪಾಲಿಗೆ 2ನೇ ಟೆಸ್ಟ್ ವಿದಾಯದ ಪಂದ್ಯವಾಗುವ ಸಾಧ್ಯತೆಯಿದೆ.

ಮಂದ ಬೆಳಕಿನ ನಂತರ ಭಾರೀ ಮಳೆ ಸುರಿದ ನಂತರ ಅಂಪೈರ್‌ಗಳು ದಿನದಾಟವನ್ನು ರದ್ದುಪಡಿಸಲು ನಿರ್ಧರಿಸಿದರು. ಉತ್ತರ ಭಾರತ ನಗರದಲ್ಲಿ ಶನಿವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿರುವ ಭಾರತವು ಮೋಡ ಕವಿದ ವಾತಾವರಣದಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ನಾಯಕ ರೋಹಿತ್ ಶರ್ಮಾ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡ ವೇಗದ ಬೌಲರ್ ಆಕಾಶ್‌ದೀಪ್(2-34) ಪಂದ್ಯ ಆರಂಭವಾಗಿ ಒಂದು ಗಂಟೆ ಕಳೆಯುವಷ್ಟರಲ್ಲಿ ಎರಡು ವಿಕೆಟ್‌ಗಳನ್ನು ಉರುಳಿಸಿದರು.

ಆರಂಭಿಕ ಬ್ಯಾಟರ್ ಝಾಕಿರ್ ಹಸನ್‌ರನ್ನು ಶೂನ್ಯಕ್ಕೆ ಪೆವಿಲಿಯನ್‌ಗೆ ಕಳುಹಿಸಿದ ಆಕಾಶ್ ದೀಪ್, ಇನ್ನೋರ್ವ ಆರಂಭಿಕ ಬ್ಯಾಟರ್ ಶಾದ್‌ಮಾನ್ ಇಸ್ಲಾಮ್(24 ರನ್)ವಿಕೆಟನ್ನೂ ಬೇಗನೆ ಉರುಳಿಸಿದರು. ಹಸನ್ 24 ಎಸೆತಗಳನ್ನು ಎದುರಿಸಿದ್ದರೂ ರನ್ ಖಾತೆ ತೆರೆಯುವಲ್ಲಿ ವಿಫಲರಾದರು.

ನಾಯಕ ನಜ್ಮುಲ್ ಹುಸೈನ್ ಶಾಂಟೊ(31 ರನ್)ಮೂಮಿನುಲ್ ಹಕ್(ಔಟಾಗದೆ 40 ರನ್)ಅವರೊಂದಿಗೆ ಮೂರನೇ ವಿಕೆಟ್‌ಗೆ 51 ರನ್ ಸೇರಿಸಿ ಮೊದಲ ಸೆಶನ್ ಆಡಿದರು. ಆದರೆ ಮೊದಲ ಪಂದ್ಯದ ಹೀರೊ ಆರ್.ಅಶ್ವಿನ್ ಲಂಚ್ ವಿರಾಮದ ನಂತರ ಈ ಜೋಡಿಯನ್ನು ಬೇರ್ಪಡಿಸಿದರು.

ಶತಕ ಹಾಗೂ ಆರು ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಮೊದಲ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಫ್ ಸ್ಪಿನ್ನರ್ ಅಶ್ವಿನ್ ಅವರು ನಜ್ಮುಲ್‌ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು.

ಮೂವರು ವೇಗಿಗಳೊಂದಿಗೆ ಕಣಕ್ಕಿಳಿದ ಭಾರತವು ಎದುರಾಳಿ ಬ್ಯಾಟರ್‌ಗಳನ್ನು ನಿರಂತರವಾಗಿ ಕಾಡಿತು.

ಗುರುವಾರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಬಾಂಗ್ಲಾದೇಶದ ಮಾಜಿ ನಾಯಕ ಶಾಕಿಬ್ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ತನ್ನ ತಾಯ್ನಾಡಿಗೆ ಮರಳಲು ಅಸಮರ್ಥರಾದರೆ ಇದು ಅವರ ಕೊನೆಯ ಟೆಸ್ಟ್ ಪಂದ್ಯ ಎನಿಸಿಕೊಳ್ಳಬಹುದು.

ಶಾಕಿಬ್ ಅವರು ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷದ ಮಾಜಿ ಜನಪ್ರತಿನಿಧಿಯಾಗಿದ್ದಾರೆ. ಶಾಕಿಬ್ ಹಾಗೂ 12 ಜನರ ವಿರುದ್ಧ ಕ್ರಿಮಿನಲ್ ಆರೋಪಗಳ ಬೆದರಿಕೆ ಇರುವ ಕಾರಣ ಬಾಂಗ್ಲಾದೇಶದಿಂದ ದೂರ ಉಳಿದಿದ್ದಾರೆ.

ಚೆನ್ನೈನಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯವನ್ನು 280 ರನ್‌ಗಳ ಅಂತರದಿಂದ ಗೆದ್ದುಕೊಂಡಿರುವ ಭಾರತವು ಎರಡು ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸುವ ಫೇವರಿಟ್ ತಂಡವಾಗಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರ್ಯಾಂಕಿಂಗ್‌ನಲ್ಲಿ ಲಾಭ ಗಿಟ್ಟಿಸುವ ವಿಶ್ವಾಸದಲ್ಲಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News