ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ತಕ್ಷಣ ಕೆಕೆಆರ್ ಸಲಹೆಗಾರನಾಗಿ ಡ್ವೇನ್‌ ಬ್ರಾವೊ ನೇಮಕ

Update: 2024-09-27 15:18 GMT

 ಡ್ವೇನ್‌ ಬ್ರಾವೊ |  PC : PTI  

ಕೋಲ್ಕತಾ : ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಡ್ವೇನ್‌ ಬ್ರಾವೊ ಶುಕ್ರವಾರ ಐಪಿಎಲ್‌ನ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ತಂಡದ ಸಲಹೆಗಾರನಾಗಿ ನೇಮಕಗೊಂಡಿದ್ದಾರೆ.

ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡ ನಂತರ ಜುಲೈನಲ್ಲಿ ಸಲಹೆಗಾರನ ಹುದ್ದೆ ತೆರವಾಗಿತ್ತು. ಇದೀಗ ಗಂಭೀರ್ ಸ್ಥಾನವನ್ನು ಬ್ರಾವೊ ತುಂಬಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಬ್ರಾವೊ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪ್ರಕಟಿಸಿದ ಕೆಲವೇ ಗಂಟೆಗಳ ನಂತರ ಕೆಕೆಆರ್ ಈ ಘೋಷಣೆ ಮಾಡಿದೆ.

ನನಗೆ ಎಲ್ಲವನ್ನೂ ನೀಡಿರುವ ಪಂದ್ಯದಿಂದ ನಾನು ಇಂದು ಗುಡ್‌ಬೈ ಹೇಳುತ್ತಿರುವೆ. ನನಗೆ ಕ್ರೀಡೆ ಹೊರತುಪಡಿಸಿ ಬೇರ್ಯಾವುದರಲ್ಲೂ ಆಸಕ್ತಿ ಇರಲಿಲ್ಲ. ನಾನು ನಿಮಗಾಗಿ ನನ್ನ ಇಡೀ ಜೀವನವನ್ನು ಅರ್ಪಿಸಿದ್ದೇನೆ. ಇದಕ್ಕೆ ಪ್ರತಿಯಾಗಿ ನನ್ನ ಹಾಗೂ ನನ್ನ ಕುಟುಂಬಕ್ಕಾಗಿ ನಾನು ಕನಸು ಕಂಡ ಜೀವನವನ್ನು ನೀವು ನನಗೆ ಕೊಟ್ಟಿದ್ದೀರಿ. ಅದಕ್ಕಾಗಿ ನಾನು ನಿಮಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಕಡಿಮೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬ್ರಾವೊ ಪೋಸ್ಟ್ ಮಾಡಿದ್ದಾರೆ.

ಗಾಯದ ಸಮಸ್ಯೆಯ ಕಾರಣಕ್ಕೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ರಾವೊಗೆ ವಿದಾಯ ಪಂದ್ಯ ಆಡಲು ಸಾಧ್ಯವಾಗಲಿಲ್ಲ. 582 ಪಂದ್ಯಗಳಲ್ಲಿ 631 ವಿಕೆಟ್‌ಗಳನ್ನು ಕಬಳಿಸಿರುವ ಬ್ರಾವೊ ಟಿ-20 ಕ್ರಿಕೆಟಿನ ಗರಿಷ್ಠ ವಿಕೆಟ್ ಸರದಾರನಾಗಿ ಉಳಿದುಕೊಂಡಿದ್ದಾರೆ.

40ರ ಹರೆಯದ ಬ್ರಾವೊ 2018ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಆದರೆ 2020ರ ಟಿ-20 ವಿಶ್ವಕಪ್ ತಯಾರಿಗಾಗಿ 2019ರಲ್ಲಿ ನಿವೃತ್ತಿ ನಿರ್ಧಾರವನ್ನು ಹಿಂಪಡೆದರು. 2021ರಲ್ಲಿ ನಿವೃತ್ತಿಯಾಗುವ ದೃಢ ನಿರ್ಧಾರಕ್ಕೆ ಬಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News