"ನಾನು ಏನು ತಪ್ಪು ಮಾಡಿದ್ದೇನೆ?”: ಟ್ರೋಲ್‌ ಗೆ ಬೇಸರ ವ್ಯಕ್ತಪಡಿಸಿದ ಪೃಥ್ವಿ ಶಾ

Update: 2024-11-28 08:17 GMT

ಪೃಥ್ವಿ ಶಾ | PC : X 

ಹೊಸದಿಲ್ಲಿ: ಸೌದಿ ಅರೇಬಿಯಾದ ಜಿದ್ದಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ತಮ್ಮನ್ನು ಯಾವ ತಂಡಗಳೂ ಖರೀದಿಸದ ಕುರಿತು ಕೆಲವು ಸಾಮಾಜಿಕ ಬಳಕೆದಾರರು ಟ್ರೋಲ್ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮುಂಬೈ ಬ್ಯಾಟರ್ ಪೃಥ್ವಿ ಶಾ, “ನಾನೇನು ತಪ್ಪು ಮಾಡಿದ್ದೇನೆ?” ಎಂದು ನೋವಿನಿಂದ ಪ್ರಶ್ನಿಸಿದ್ದಾರೆ.

ನವೆಂಬರ್ 23ರಂದು ನಡೆದ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯ ಮೊದಲ ದಿನದಂದು ರೂ. 75 ಲಕ್ಷ ಮೂಲ ಬೆಲೆ ಹೊಂದಿದ್ದ ಪೃಥ್ವಿ ಶಾರನ್ನು ಯಾವ ತಂಡಗಳೂ ಖರೀದಿಸಲು ಮುಂದಾಗಲಿಲ್ಲ. ಎರಡನೆ ಹಾಗೂ ಕೊನೆಯ ದಿನದಂದು ಹರಾಜು ಪ್ರಕ್ರಿಯೆ ತೀವ್ರ ಬಿರುಸು ಪಡೆದರೂ, ಅಂದೂ ಕೂಡಾ ಪೃಥ್ವಿ ಶಾರನ್ನು ಯಾವ ತಂಡಗಳೂ ಖರೀದಿಸಲಿಲ್ಲ. ಇದರ ಬೆನ್ನಿಗೇ ಪೃಥ್ವಿ ಶಾರನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರವಾಗಿ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ದಾಳಿಯ ಕುರಿತು ವಿಡಿಯೊ ಸಂದೇಶವೊಂದರಲ್ಲಿ ಬೇಸರ ಹೊರ ಹಾಕಿರುವ ಪೃಥ್ವಿ ಶಾ, ಕೆಲವರು ನನ್ನನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸದಿದ್ದರೂ, ನನ್ನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರುತ್ತಾರೆ. “ಆತ ನನ್ನನ್ನು ಹಿಂಬಾಲಿಸುತ್ತಿಲ್ಲವೆಂದ ಮೇಲೆ, ಆತ ಹೇಗೆ ನನ್ನನ್ನು ಟ್ರೋಲ್ ಮಾಡಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಕೆಲವು ಮೀಮ್ ಹಾಗೂ ಪ್ರತಿಕ್ರಿಯೆಗಳಿಂದ ನನಗೆ ನೋವಾಗಿದೆ ಎಂದೂ ಅವರು ಒಪ್ಪಿಕೊಂಡಿದ್ದಾರೆ.

“ಒಂದು ವೇಳೆ ಜನರು ನನ್ನ ಕುರಿತು ಮೀಮ್ ಗಳನ್ನು ಮಾಡಿದರೆ, ನಾನು ಅವನ್ನು ಹಾಗೆಯೇ ಸ್ವೀಕರಿಸುತ್ತೇನೆ. ಕೆಲವೊಮ್ಮೆ ನನಗೆ ನೋವಾಗುತ್ತದೆ. ಕೆಲವೊಮ್ಮೆ ಅದು ತಪ್ಪಾಗಿದೆ, ಆತ ಹಾಗೆ ಹೇಳಬಾರದಿತ್ತು ಎಂದೆನ್ನಿಸುತ್ತದೆ. ನಾನು ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ, ಜನರು “ಪೃಥ್ವಿ ಶಾ ಏನು ಮಾಡುತ್ತಿದ್ದ, ಆತ ಅಭ್ಯಾಸ ಮಾಡುತ್ತಿದ್ದ” ಎಂದು ಹೇಳಲು ಪ್ರಾರಂಭಿಸುತ್ತಾರೆ” ಎಂದೂ ಅವರು ಹೇಳಿದ್ದಾರೆ.

ನಾನು ನನ್ನ ಜನ್ಮದಿನಾಚರಣೆಯ ಸಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದ ವಿಡಿಯೊ ಇತ್ತೀಚೆಗೆ ಟ್ರೋಲ್ ಗೆ ಒಳಗಾಗಿತ್ತು. ನನ್ನ ಕ್ರಿಕೆಟ್ ಬದ್ಧತೆಯ ಕುರಿತು ಪ್ರಶ್ನಿಸಿದ್ದ ಟೀಕಾಕಾರರು, ನಾನು ಅಭ್ಯಾಸವನ್ನು ನಿರ್ಲಕ್ಷಿಸುತ್ತಿದ್ದೇನೆ ಎಂದು ಆರೋಪಿಸಿದ್ದರು ಎಂಬುದರತ್ತಲೂ ಅವರು ಬೊಟ್ಟು ಮಾಡಿದ್ದಾರೆ.

“ಅದು ನನ್ನ 25ನೇ ಜನ್ಮದಿನಾಚರಣೆಯಾಗಿತ್ತು. ನಾನು ವರ್ಷದಲ್ಲಿ ಒಂದು ದಿನ ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಭ್ರಮಾಚರಣೆ ಮಾಡುತ್ತಿದ್ದೆ. ಹೀಗಿದ್ದೂ, ನಾನೇನು ತಪ್ಪು ಮಾಡಿದೆ ಎಂದು ನನಗೆ ಸೋಜಿಗವಾಯಿತು” ಎಂದು ಅವರು ಹೇಳಿದ್ದಾರೆ.

ತಮ್ಮ ಪರಿಸ್ಥಿತಿಯ ಕುರಿತು ನೋವು ತೋಡಿಕೊಂಡಿರುವ ಪೃಥ್ವಿ ಶಾ, ಗ್ರಹಿಕೆಯು ನ್ಯಾಯಯುತವಾಗಿರಬೇಕು ಎಂದು ಕರೆ ನೀಡಿದ್ದಾರೆ. “ಒಂದು ವೇಳೆ ಏನಾದರೂ ತಪ್ಪಿಲ್ಲದಿದ್ದರೆ, ಅದನ್ನು ಹಾಗೆಯೇ ತೋರಿಸಬೇಕು” ಎಂದು ಅವರು ಮನವಿ ಮಾಡಿದ್ದಾರೆ.

ಪೃಥ್ವಿ ಶಾರ ಈ ಹೇಳಿಕೆಯು ಸಾರ್ವಜನಿಕ ವ್ಯಕ್ತಿಗಳು ಅನುಭವಿಸುವ ಒತ್ತಡ, ಖಾಸಗಿ ಕ್ಷಣಗಳನ್ನು ವೃತ್ತಿಪರ ನಿರೀಕ್ಷೆಗಳೊಂದಿಗೆ ಸರಿದೂಗಿಸಬೇಕಾದ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News