ಪಿ.ಟಿ.ಉಷಾ ಮತ್ತು ಭಾರತೀಯ ಒಲಿಂಪಿಕ್ ಒಕ್ಕೂಟದ ಸದಸ್ಯರ ನಡುವೆ ಬಿಸಿಬಿಸಿ ವಾಗ್ಯುದ್ಧ
ಹೊಸದಿಲ್ಲಿ : ಭಾರತೀಯ ಒಲಿಂಪಿಕ್ ಒಕ್ಕೂಟದ ಸಿಇಒ ಆಗಿ ರಘುರಾಮ್ ಅಯ್ಯರ್ ಅವರನ್ನು ನೇಮಕ ಮಾಡಿರುವುದರ ಕುರಿತು ಭಾರತೀಯ ಒಲಿಂಪಿಕ್ ಒಕ್ಕೂಟದ ಅಧ್ಯಕ್ಷೆ ಪಿ.ಟಿ.ಉಷಾ ಹಾಗೂ ಒಕ್ಕೂಟದ ಸದಸ್ಯರ ನಡುವೆ ಗುರುವಾರದ ಕಾರ್ಯಕಾರಿ ಸಭೆಯಲ್ಲಿ ಬಿಸಿ ಬಿಸಿ ವಾಗ್ಯುದ್ಧ ನಡೆದಿದ್ದು, ಬಹುತೇಕ ಒಕ್ಕೂಟದ ಸದಸ್ಯರು ಅವರ ನೇಮಕವನ್ನು ವಿರೋಧಿಸಿರುವ ಘಟನೆ ನಡೆದಿದೆ.
ಆದರೆ, ಸಮಿತಿ ಸದಸ್ಯರ ವಾದಗಳನ್ನು ನಿರಾಕರಿಸಿರುವ ಪಿ.ಟಿ.ಉಷಾ, ರಘುರಾಮ್ ಅಯ್ಯರ್ ನೇಮಕವನ್ನು ಹಿಂಪಡೆಯಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ನಡೆದ ಕಾರ್ಯಕಾರಿ ಸಭೆಯ ಪ್ರಮುಖ ಕಾರ್ಯಸೂಚಿ ಸಿಇಒ ಆಗಿ ನೇಮಕಗೊಂಡಿರುವ ರಘುರಾಮ್ ಅಯ್ಯರ್ ಕಾರ್ಯವೈಖರಿಗೆ ಶ್ರೇಣೀಕರಣ ನೀಡುವ ಕುರಿತಾಗಿತ್ತು. ಆದರೆ, ಈ ಸಭೆ ಯಾವುದೇ ಪರಿಹಾರ ಕಾಣದೆ ಅಂತ್ಯಗೊಂಡಿತು. ಎರಡೂ ಕಡೆಯವರು ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ, ಉಭಯತ್ರಯರ ನಡುವೆ ಬಿಸಿ ಬಿಸಿ ಮಾತಿನ ಚಕಮಕಿಗೆ ಕಾರಣವಾಯಿತು ಎನ್ನಲಾಗಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಿ.ಟಿ.ಉಷಾ, "ಈ ನೇಮಕಾತಿ ಪ್ರಕ್ರಿಯೆಗೆ ಎರಡು ವರ್ಷಗಳ ಅವಧಿ ಹಿಡಿಯಿತು. ಅವರು ಮತ್ತೆ ಈ ಹುದ್ದೆಗೆ ಹೊಸದಾಗಿ ಜಾಹೀರಾತು ನೀಡಬೇಕು ಎಂದು ಬಯಸುತ್ತಿದ್ದಾರೆ. ಈ ಮಾತಿನ ಅರ್ಥ ನಮಗೆ ಈ ವ್ಯಕ್ತಿ ಬೇಡ ಎನ್ನುವುದಾಗಿದ್ದು, ಹೊಸದಾಗಿ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ಎಂಬುದೇ ಆಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುತೂಹಲಕರ ಸಂಗತಿಯೆಂದರೆ, ಈ ಸಭೆಗೆ ಆನ್‌ಲೈನ್ ಮೂಲಕ ಭಾಗಿಯಾಗಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿರ್ದೇಶಕ ಜೆರೋಮ್ ಪೊಯ್ವಿ ಕಣ್ಣೆದುರೇ ಈ ವಾಗ್ಯುದ್ಧ ನಡೆಯಿತು.