ಭಾರತ ಬಾಂಗ್ಲಾ ಪಂದ್ಯಕ್ಕೆ ಮಳೆ ಅಡ್ಡಿ | ಹವಾಮಾನ ಮುನ್ಸೂಚನೆ ; ಮೊದಲ ದಿನದ ಆಟ ಅನುಮಾನ?
ಕಾನ್ಪುರ : ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಪಂದ್ಯದ ಮೊದಲ ಮೂರು ದಿನಗಳ ಕಾಲ ಕಾನ್ಪುರದಲ್ಲಿ ಮೋಡ ಮುಸುಕಿದ ವಾತಾವರಣ ಇರಬಹುದು ಎಂದು ಹವಾಮಾನ ಮುನ್ಸೂಚನೆ ಎಚ್ಚರಿಸಿದೆ.
ಪಂದ್ಯದ ಮೊದಲ ದಿನವಾದ ಶುಕ್ರವಾರ ಇಡಿ ದಿನ ಮೋಡ ಮುಸುಕಿಸ ವಾತಾವರಣವಿದ್ದು, ಮಳೆಯೂ ಸುರಿಯಬಹುದು ಎಂದು ‘ಆ್ಯಕ್ಯುವೆದರ್’ ತಿಳಿಸಿದೆ. ಶುಕ್ರವಾರ ಬೆಳಗ್ಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಅದು ಎಚ್ಚರಿಸಿದೆ.
‘‘ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಎರಡು ಬಾರಿ ಗುಡುಗು ಸಹಿತ ಮಳೆಯಾಗಬಹುದು’’ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಶುಕ್ರವಾರ ಸಂಜೆಯ ವೇಳೆಗೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ. ಮೋಡ ಕವಿದ ವಾತಾವರಣದ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯಬಹುದಾಗಿದೆ.
ಪಂದ್ಯ ಆರಂಭದ ಮುನ್ನಾ ದಿನಗಳಂದು ಕಾನ್ಪುರದಲ್ಲಿ ಮಳೆಯಾಗಿದೆ. ಗುರುವಾರ ಮಳೆಯಿಂದಾಗಿ ಭಾರತೀಯ ತಂಡಕ್ಕೆ ಸಂಪೂರ್ಣ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ.