ಕಾನ್ಪುರ ಸ್ಟೇಡಿಯಮ್‌ನ ಒಂದು ಸ್ಟ್ಯಾಂಡ್ ಕುಸಿಯಬಹುದು!

Update: 2024-09-26 15:47 GMT

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಮ್ | PC : X 

ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯ ನಡೆಯುವ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಮ್ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ.

2021ರ ಬಳಿಕ, ಈ ಮೈದಾನದಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದೆ. ಆದರೆ, ಈ ಸ್ಟೇಡಿಯಮ್‌ನ ಒಂದು ಸ್ಟ್ಯಾಂಡ್ ಅಪಾಯಕಾರಿಯಾಗಿದೆ ಎಂದು ಉತ್ತರಪ್ರದೇಶ ಲೋಕೋಪಯೋಗಿ ಇಲಾಖೆ ಎಚ್ಚರಿಸಿದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ನ ವರದಿ ಎಚ್ಚರಿಸಿದೆ.

ಈ ಸ್ಟ್ಯಾಂಡ್‌ನ ಪೂರ್ಣ ಸಾಮರ್ಥ್ಯ ಬಳಕೆಯಾದರೆ ಅದು ಕುಸಿಯಬಹುದು ಎಂಬ ಎಚ್ಚರಿಕೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.

‘‘ಲೋಕೋಪಯೋಗಿ ಇಲಾಖೆಯು ಕೆಲವು ಸಮಸ್ಯೆಗಳತ್ತ ಬೆಟ್ಟುಮಾಡಿದೆ. ಹಾಗಾಗಿ, ಬಾಲ್ಕನಿ ‘ಸಿ’ಯ ಎಲ್ಲಾ ಟಿಕೆಟ್‌ಗಳನ್ನು ಮಾರಾಟ ಮಾಡದಿರಲು ನಾವು ಒಪ್ಪಿದ್ದೇವೆ’’ ಎಂದು ಉತ್ತರಪ್ರದೇಶ ಕ್ರಿಕೆಟ್ ಅಸೋಸಿಯೇಶನ್ (ಯುಪಿಸಿಎ)ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಂಕಿತ್ ಚಟರ್ಜಿ ಹೇಳಿದ್ದಾರೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

‘‘ಆ ಸ್ಟ್ಯಾಂಡ್‌ನ ಪೂರ್ಣ ಸಾಮರ್ಥ್ಯ 4,800. 1,700 ಟಿಕೆಟ್‌ಗಳನ್ನು ಮಾತ್ರ ಮಾರಾಟ ಮಾಡುವಂತೆ ನಮಗೆ ತಿಳಿಸಲಾಗಿದೆ. ಮುಂದಿನ ಎರಡು ದಿನಗಳ ಕಾಲ ದುರಸ್ತಿ ಕಾರ್ಯ ಮುಂದುವರಿಯಲಿದೆ’’ ಎಂದು ಅಂಕಿತ್ ಚಟರ್ಜಿ ಮಂಗಳವಾರ ಹೇಳಿದ್ದಾರೆ.

ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ, ಇಂಜಿನಿಯರ್‌ಗಳ ತಂಡವೊಂದು ಬಾಲ್ಕನಿ ‘ಸಿ’ಯಲ್ಲಿ ಸುದೀರ್ಘ ಕಾಲ ತಪಾಸಣೆ ನಡೆಸಿ, ಪಂದ್ಯದ ವೇಳೆ ಆ ಸ್ಟ್ಯಾಂಡನ್ನು ಮುಚ್ಚುವಂತೆ ಯುಪಿಸಿಎಗೆ ಸೂಚಿಸಿದ್ದರು ಎನ್ನಲಾಗಿದೆ.

‘‘ರಿಶಭ್ ಪಂತ್ ಸಿಕ್ಸ್ ಬಾರಿಸಿದಾಗ ಅಭಿಮಾನಿಗಳು ಕುಣಿದರೆ, 50 ಪ್ರೇಕ್ಷಕರ ಭಾರವನ್ನೂ ಅದು ತಾಳಲಾರದು. ಸ್ಟೇಡಿಯಮ್‌ನ ಈ ಭಾಗಕ್ಕೆ ತುರ್ತು ದುರಸ್ತಿಯ ಅಗತ್ಯವಿದೆ’’ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಒಬ್ಬರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News