ಎರಡನೇ ಟ್ವೆಂಟಿ-20: ದಕ್ಷಿಣ ಆಫ್ರಿಕಾವನ್ನು ಮಣಿಸಿ ಸರಣಿ ಗೆದ್ದ ವೆಸ್ಟ್ ಇಂಡೀಸ್
ಟರೌಬ : ತನ್ನ ಇನಿಂಗ್ಸ್ ನಲ್ಲಿ 13 ಸಿಕ್ಸರ್ಗಳನ್ನು ಸಿಡಿಸಿದ ಆತಿಥೇಯ ವೆಸ್ಟ್ ಇಂಡೀಸ್ ತಂಡ ಎರಡನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 30 ರನ್ನಿಂದ ಮಣಿಸಿದೆ. ಈ ಮೂಲಕ ಟಿ-20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ವಶಪಡಿಸಿಕೊಂಡಿದೆ.
ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ತಂಡ 6 ವಿಕೆಟ್ಗಳ ನಷ್ಟಕ್ಕೆ 179 ರನ್ ಗಳಿಸಿತು. 14 ಓವರ್ಗಳ ಅಂತ್ಯಕ್ಕೆ 111 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಶೈ ಹೋಪ್(41 ರನ್, 22 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ನಾಯಕ ರೊವ್ಮನ್ ಪೊವೆಲ್(35 ರನ್, 22 ಎಸೆತ, 1 ಬೌಂಡರಿ 3 ಸಿಕ್ಸರ್)ಆಸರೆಯಾದರು.
ಗೆಲ್ಲಲು 180 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡ ಕೇವಲ 4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ 149 ರನ್ಗೆ ಗಂಟುಮೂಟೆ ಕಟ್ಟಿತು.
ಒಂದು ಹಂತದಲ್ಲಿ 6 ವಿಕೆಟ್ಗಳ ನಷ್ಟಕ್ಕೆ 138 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಕೊನೆಯ 4 ಓವರ್ಗಳಲ್ಲಿ ಗೆಲ್ಲಲು 42 ರನ್ ಅಗತ್ಯವಿತ್ತು. ಆದರೆ ಅದು 11 ರನ್ ಸೇರಿಸುವಷ್ಟರಲ್ಲಿ 19.4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ರೊಮರಿಯೊ ಶೆಫರ್ಡ್ಗೆ(3-15) ವಿಕೆಟ್ ಒಪ್ಪಿಸುವ ಮೊದಲು ಆರಂಭಿಕ ಆಟಗಾರ ರೀಝಾ ಹೆಂಡ್ರಿಕ್ಸ್ 18 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ಗಳ ಸಹಿತ 44 ರನ್ ಗಳಿಸಿ ಸರ್ವಾಧಿಕ ಸ್ಕೋರರ್ ಎನಿಸಿಕೊಂಡರು. ಟ್ರಿಸ್ಟಾನ್ ಸ್ಟರ್ಬ್ಸ್(28 ರನ್, 24 ಎಸೆತ), ರಿಯಾನ್ ರಿಕೆಲ್ಟನ್(20 ರನ್, 13 ಎಸೆತ),ನಾಯಕ ಮರ್ಕ್ರಮ್(19 ರನ್, 9 ಎಸೆತ) ಹಾಗೂ ರಾಸ್ಸಿ ವಾನ್ಡರ್ ಡುಸೆನ್(17 ರನ್, 24 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ವೆಸ್ಟ್ ಇಂಡೀಸ್ ಪರ ಶೆಫರ್ಡ್(3-15) ಹಾಗೂ ಶಮರ್ ಜೋಸೆಫ್(3-31)ತಲಾ ಮೂರು ವಿಕೆಟ್ಗಳನ್ನು ಉರುಳಿಸಿದರು. ಅಕೀಲ್ ಹುಸೇನ್(2-25)ಎರಡು ವಿಕೆಟ್ ಪಡೆದರು. ಶೆಫರ್ಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವೆಸ್ಟ್ ಇಂಡೀಸ್ ತಂಡ ಶುಕ್ರವಾರ ನಡೆದಿದ್ದ ಮೊದಲ ಟಿ20 ಪಂದ್ಯವನ್ನು 7 ವಿಕೆಟ್ಗಳ ಅಂತರದಿಂದ ಗೆದ್ದುಕೊಂಡಿತ್ತು. ಇದೀಗ ಸರಣಿಯಲ್ಲಿ 2-0 ಮುನ್ನಡೆ ಪಡೆದಿರುವ ವಿಂಡೀಸ್ ತಂಡ ಮಂಗಳವಾರ ಮೂರನೇ ಹಾಗೂ ಕೊನೆಯ ಟಿ20 ಪಂದ್ಯವನ್ನು ಆಡಲಿದೆ.
►ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್: 20 ಓವರ್ಗಳಲ್ಲಿ 179/6
(ಶೈ ಹೋಪ್ 41, ರೊವ್ಮನ್ ಪೊವೆಲ್ 35, ಶೆರ್ಫಾನ್ ರುದರ್ಫೋರ್ಡ್ 29, ಅಲಿಕ್ ಅಥನಾಝ್ 28, ಲಿಝಾಡ್ ವಿಲಿಯಮ್ಸ್ 3-36, ಪ್ಯಾಟ್ರಿಕ್ ಕ್ರೂಗರ್ 2-29)
ದಕ್ಷಿಣ ಆಫ್ರಿಕಾ: 19.4 ಓವರ್ಗಳಲ್ಲಿ 149 ರನ್ಗೆ ಆಲೌಟ್
(ರೀಝಾ ಹೆಂಡ್ರಿಕ್ಸ್ 44, ಸ್ಟರ್ಬ್ಸ್ 28, ರಿಕೆಲ್ಟನ್ 20, ರೊಮಾರಿಯೊ ಶೆಫರ್ಡ್ 3-15, ಶಮರ್ ಜೋಸೆಫ್ 3-31)
ಪಂದ್ಯಶ್ರೇಷ್ಠ: ರೊಮಾರಿಯೊ ಶೆಫರ್ಡ್