ಏಕೈಕ ಟೆಸ್ಟ್: ಭಾರತದ ಮಹಿಳಾ ಕ್ರಿಕೆಟ್ ತಂಡ ಮೇಲುಗೈ
ಮುಂಬೈ: ಸ್ಪಿನ್ನರ್ ದೀಪ್ತಿ ಶರ್ಮಾ(5-7) ಕರಾರುವಾಕ್ ದಾಳಿಯ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡವನ್ನು ಏಕೈಕ ಟೆಸ್ಟ್ ಪಂದ್ಯದ 2ನೇ ದಿನವಾದ ಶುಕ್ರವಾರ ಮೊದಲ ಇನಿಂಗ್ಸ್ ನಲ್ಲಿ ಕೇವಲ 136 ರನ್ ಗೆ ಆಲೌಟ್ ಮಾಡಿತು.
7 ವಿಕೆಟ್ ಗೆ 410 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡವನ್ನು ಇಂಗ್ಲೆಂಡ್ 428 ರನ್ ಗೆ ನಿಯಂತ್ರಿಸಿತು. ಇಂಗ್ಲೆಂಡ್ ಪರ ಮೊದಲ ಇನಿಂಗ್ಸ್ ನಲ್ಲಿ ನಾಟ್ ಸೀವೆರ್ ಬ್ರಂಟ್(59 ರನ್)ಏಕಾಂಗಿ ಹೋರಾಟ ನೀಡಿದರು. ಉಳಿದವರು ದೀಪ್ತಿ ಹಾಗೂ ಸ್ನೇಹ್ ರಾಣಾ(2-25)ಬೌಲಿಂಗ್ ದಾಳಿಗೆ ನಿರುತ್ತರವಾದರು.
ಇಂಗ್ಲೆಂಡ್ ಗೆ ಫಾಲೋ ಆನ್ ಹೇರದೆ 2ನೇ ಇನಿಂಗ್ಸ್ ಆರಂಭಿಸಿರುವ ಭಾರತವು ದಿನದಾಟದಂತ್ಯಕ್ಕೆ 42 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದೆ. ಒಟ್ಟಾರೆ 478 ರನ್ ಮುನ್ನಡೆ ಸಾಧಿಸಿ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ.
ಭಾರತದ 2ನೇ ಇನಿಂಗ್ಸ್ ನಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ ಔಟಾಗದೆ 44 ರನ್ ಗಳಿಸಿದ್ದಾರೆ. ಶೆಫಾಲಿ ವರ್ಮಾ(33 ರನ್), ಜೆಮಿಮಾ ರೋಡ್ರಿಗಸ್(27 ರನ್) ಹಾಗೂ ಸ್ಮತಿ ಮಂಧಾನ(26 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಇಂಗ್ಲೆಂಡ್ ಪರ ಚಾರ್ಲಿ ಡೀನ್(4-68)ಯಶಸ್ವಿ ಬೌಲರ್ ಎನಿಸಿಕೊಂಡರು.