ದಕ್ಷಿಣ ಆಫ್ರಿಕಾ ಪ್ರವಾಸ: ಟೆಸ್ಟ್ ಪಂದ್ಯಕ್ಕೆ ಮಾತ್ರ ಪರಿಗಣಿಸಲು ಬಿಸಿಸಿಐಯನ್ನು ಕೋರಿದ ಕೊಹ್ಲಿ
ಹೊಸದಿಲ್ಲಿ: ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದೆದುರು ಭಾರತದ ಸೋಲಿನ ಹೊರತಾಗಿಯೂ ಟೂರ್ನಿಯಲ್ಲಿ ಅತ್ಯಧಿನ ರನ್ ಸ್ಕೋರರ್ ಆಗಿ ಹೊರಹೊಮ್ಮಿರುವ ವಿರಾಟ್ ಕೊಹ್ಲಿ ಮುಂಬರುವ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ವೈಟ್-ಬಾಲ್ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಈ ಪ್ರವಾಸವು ಡಿಸೆಂಬರ್ 10ರಂದು ಡರ್ಬನ್‌ನಲ್ಲಿ ಮೊದಲ ಟಿ20 ಪಂದ್ಯದೊಂದಿಗೆ ಆರಂಭಗೊಳ್ಳಲಿದೆ.
ಸೀಮಿತ ಓವರ್ ಗಳ ಪಂದ್ಯಗಳಿಂದ ಹೊರಗುಳಿಯುವ ತಮ್ಮ ನಿರ್ಧಾರವನ್ನು ಕೊಹ್ಲಿ ಬಿಸಿಸಿಐ ಗೆ ತಿಳಿಸಿದ್ದಾರೆನ್ನಲಾಗಿದ್ದು ಅವರು ಟೆಸ್ಟ್ ಪಂದ್ಯಗಳಲ್ಲಿ ಆಡುವ ನಿರೀಕ್ಷೆಯಿದೆ.
ತಮಗೆ ಸೀಮಿತ ಓವರ್ ಗಳ ಕ್ರಿಕೆಟ್‌ನಿಂದ ವಿರಾಮದ ಅಗತ್ಯವಿದೆ, ಮತ್ತೆ ಆಡಬೇಕೆನಿಸಿದಾಗ ವಾಪಸಾಗುವುದಾಗಿ ಕೊಹ್ಲಿ ತಿಳಿಸಿದ್ದಾರೆಂದು ಮೂಲವೊಂದು ತಿಳಿಸಿದೆ. ಸದ್ಯ ಅವರು ಟೆಸ್ಟ್ ಕ್ರಿಕೆಟ್ ಮಾತ್ರ ಆಡಲಿದ್ದು ಆದ್ದರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗೆ ಅವರನ್ನು ಆಯ್ಕೆಗಾರರು ಆರಿಸಬಹುದಾಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸದ ಭಾಗವಾಗಿ ಮೂರು ಟಿ20 ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಮತ್ತು ಎರಡು ಟೆಸ್ಟ್ ಪಂದ್ಯಗಳಿರಲಿವೆ.