ಟೆಸ್ಟ್ ಕ್ರಿಕೆಟ್‌ ನಿಂದ ದಕ್ಷಿಣ ಆಫ್ರಿಕಾದ ವಿಕೆಟ್‌ ಕೀಪರ್-ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ನಿವೃತ್ತಿ

Update: 2024-01-08 17:20 GMT

ಹೆನ್ರಿಕ್ ಕ್ಲಾಸೆನ್ | Photo: PTI 

ಕೇಪ್ಟೌನ್: 2024ರ ದೇಶದ ಟೆಸ್ಟ್ ಕ್ರಿಕೆಟ್ ಯೋಜನೆಯ ಭಾಗವಾಗಿರುವೆ ಎಂದು ಈ ಹಿಂದೆ ಸುಳಿವು ನೀಡಿರುವ ಹೊರತಾಗಿಯೂ ದಕ್ಷಿಣ ಆಫ್ರಿಕಾದ ಡೈನಾಮಿಕ್ ವಿಕೆಟ್‌ ಕೀಪರ್-ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ರೆಡ್ ಬಾಲ್ ಕ್ರಿಕೆಟ್‌ ನಿಂದ ನಿವೃತ್ತಿಯಾಗುತ್ತೇನೆ ಎಂದು ಘೋಷಿಸಿರುವುದಾಗಿ ಟೆಸ್ಟ್ ಕೋಚ್ ಶುಕ್ರಿ ಕಾನ್ರಾಡ್ ಹೇಳಿದ್ದಾರೆ.

ಮಧ್ಯಮ ಓವರ್ನಲ್ಲಿ ತನ್ನ ಶಕ್ತಿಶಾಲಿ ಹೊಡೆತಗಳ ಮೂಲಕ ಜನಪ್ರಿಯರಾಗಿದ್ದ ಕ್ಲಾಸೆನ್ ದಕ್ಷಿಣ ಆಫ್ರಿಕಾದ ಸೀಮಿತ ಓವರ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ.

2019 ಹಾಗೂ 2023ರ ಮಧ್ಯೆ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ಕ್ಲಾಸೆನ್ ನಿವೃತ್ತಿಯ ನಿರ್ಧಾರ ಪ್ರಕಟಿಸಿದ್ದಾರೆ. ಈ ಅವಧಿಯಲ್ಲಿ ಅವರು 13ರ ಸರಾಸರಿಯಲ್ಲಿ ಕೇವಲ 108 ರನ್ ಗಳಿಸಿದ್ದರು.

32ರ ಹರೆಯದ ಬ್ಯಾಟರ್ ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧ ಏಕದಿನ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ 83 ಎಸೆತಗಳಲ್ಲಿ 174 ರನ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಟೆಸ್ಟ್ ಕ್ರಿಕೆಟ್ ಮೇಲೆ ತನ್ನ ಒಲವನ್ನು ವ್ಯಕ್ತಪಡಿಸಿದ್ದರು. ಹೊಸ ಸವಾಲು ನನಗಾಗಿ ಕಾಯುತ್ತಿದೆ ಎಂದಿದ್ದರು.

ಕೆಲವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದ ನಂತರ ನಾನು ರೆಡ್ ಬಾಲ್ ಕ್ರಿಕೆಟ್‌ ನಿಂದ ನಿವೃತ್ತಿಯಾಗುವ ಸರಿಯಾದ ನಿರ್ಧಾರ ತೆಗೆದುಕೊಂಡಿರುವೆ. ಇದು ನಾನು ತೆಗೆದುಕೊಂಡ ಕಠಿಣ ನಿರ್ಧಾರವಾಗಿದೆ. ಏಕೆಂದರೆ ಟೆಸ್ಟ್ ಕ್ರಿಕೆಟ್ ನನಗೆ ತುಂಬಾ ಇಷ್ಟ ಎಂದು ಕ್ಲಾಸೆನ್ ಹೇಳಿದ್ದಾರೆ.

ಕ್ಲಾಸೆನ್ ಮುಂಬರುವ ಸವಾಲಿನ ಸ್ವರೂಪವನ್ನು ನಿರ್ದಿಷ್ಟಪಡಿಸಲಿಲ್ಲ. ಆದರೆ ಅದಕ್ಕಾಗಿ ಉತ್ಸುಕನಾಗಿದ್ದೇನೆ ಎಂದರು.

ದಕ್ಷಿಣ ಆಫ್ರಿಕಾ-20, ಇಂಡಿಯನ್ ಪ್ರೀಮಿಯರ್ ಲೀಗ್, ದಿ ಹಂಡ್ರೆಡ್ ಹಾಗೂ ಅಮೆರಿಕದ ಪ್ರಮುಖ ಲೀಗ್ ಕ್ರಿಕೆಟ್‌ ನಲ್ಲಿ ಆಡುವುದನ್ನು ಖಚಿತಪಡಿಸಿರುವ ಕ್ಲಾಸೆನ್ ಜಾಗತಿಕ ಟಿ-20 ಲೀಗ್‌ ಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

ಟೆಸ್ಟ್ ಕ್ರಿಕೆಟ್‌ ನಿಂದ ನಿವೃತ್ತಿಯಾಗಿರುವ ಕ್ಲಾಸೆನ್ ದಕ್ಷಿಣ ಆಫ್ರಿಕಾದ ಸೀಮಿತ ಓವರ್ ಕ್ರಿಕೆಟ್ ಯೋಜನೆಗಳ ಭಾಗವಾಗಿ ಉಳಿಯುವ ನಿರೀಕ್ಷೆ ಇದೆ.

ಆಟಗಾರರು ಟಿ-20 ಲೀಗ್‌ ಗಳಲ್ಲಿ ಹೆಚ್ಚು ಗಮನ ನೀಡುವ ಸಲುವಾಗಿ ಟೆಸ್ಟ್ ಕ್ರಿಕೆಟ್‌ ನಿಂದ ನಿವೃತ್ತಿಯಾಗುವುದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ನಲ್ಲಿ ಇದೀಗ ಪ್ರವೃತ್ತಿಯಾಗಿದೆ. ಕ್ವಿಂಟನ್ ಡಿಕಾಕ್, ಎಬಿ ಡಿ ವಿಲಿಯರ್ಸ್, ಎಫ್ಡು ಪ್ಲೆಸಿಸ್ ಹಾಗೂ ಡೇವಿಡ್ ಮಿಲ್ಲರ್ ಈ ಮೊದಲು ಇದೇ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News