ಸೆಪ್ಟಂಬರ್ ನಲ್ಲಿ ಆರು ದಿನದ ಟೆಸ್ಟ್ ಆಡಲಿರುವ ಶ್ರೀಲಂಕಾ-ನ್ಯೂಝಿಲ್ಯಾಂಡ್; ಕಾರಣವೇನು ಗೊತ್ತೇ?
ಕೊಲಂಬೊ: ಮುಂದಿನ ತಿಂಗಳು ಗಾಲೆಯಲ್ಲಿ ನಡೆಯಲಿರುವ ನ್ಯೂಝಿಲ್ಯಾಂಡ್ ವಿರುದ್ಧ ಶ್ರೀಲಂಕಾದ ಆರಂಭಿಕ ಟೆಸ್ಟ್ ಪಂದ್ಯಕ್ಕೆ ಆರು ದಿನಗಳನ್ನು ನಿಗದಿಪಡಿಸಲಾಗಿದ್ದು, ದೇಶದ ಅಧ್ಯಕ್ಷೀಯ ಚುನಾವಣೆಗೆ ಅವಕಾಶ ಕಲ್ಪಿಸಲು ವಿಶ್ರಾಂತಿ ದಿನವನ್ನು ಸೇರಿಸಲಾಗಿದೆ.
ಮೊದಲ ಟೆಸ್ಟ್ ಪಂದ್ಯವು ಸೆಪ್ಟಂಬರ್ 18ರಿಂದ ಆರಂಭವಾಗಲಿದ್ದು, ಸೆಪ್ಟಂಬರ್ 21ರಂದು ವಿಶ್ರಾಂತಿ ದಿನ ನಿಗದಿಪಡಿಸಲು ಯೋಜಿಸಲಾಗಿದೆ.
ಎರಡು ದಶಕಗಳ ನಂತರ ಇದೇ ಮೊದಲ ಬಾರಿ ಶ್ರೀಲಂಕಾ ಕ್ರಿಕೆಟ್ ತಂಡವು ಆರು ದಿನಗಳ ಟೆಸ್ಟ್ ಪಂದ್ಯದ ಆತಿಥ್ಯವಹಿಸಲಿದೆ. 2001ರಲ್ಲಿ ಕೊಲಂಬೊದಲ್ಲಿ ಝಿಂಬಾಬ್ವೆ ವಿರುದ್ಧ 6 ದಿನಗಳ ಟೆಸ್ಟ್ ಪಂದ್ಯ ನಿಗದಿಪಡಿಸಲಾಗಿತ್ತು. ಆಗ ಪೋಯಾ ಡೇಗೆ(ಹುಣ್ಣಿಮೆಯ ದಿನ) ರಜೆ ನೀಡಲಾಗಿತ್ತು.
ಎರಡು ಪಂದ್ಯಗಳ ಸರಣಿಯು ಈಗ ನಡೆಯುತ್ತಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿದೆ.
ಉಭಯ ತಂಡಗಳ ನಡುವೆ ಎರಡನೇ ಟೆಸ್ಟ್ ಪಂದ್ಯವು ಗಾಲೆ ಸ್ಟೇಡಿಯಮ್ನಲ್ಲಿ ಸೆಪ್ಟಂಬರ್ 26ರಿಂದ 30ರ ತನಕ ನಡೆಯಲಿದೆ.
ಕಳೆದ ಶತಮಾನದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ವಿಶ್ರಾಂತಿ ದಿನಗಳು ಸಾಮಾನ್ಯವಾಗಿದ್ದವು. ರವಿವಾರ ಸಾಮಾನ್ಯವಾಗಿ ರಜೆಯ ದಿನವಾಗಿರುವ ಕಾರಣ ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪಂದ್ಯಗಳನ್ನು ಆರು ದಿನಗಳ ಕಾಲ ಆಡಲಾಗುತ್ತದೆ.
ಬಾಂಗ್ಲಾದೇಶ ಕೂಡ 2008ರ ಡಿಸೆಂಬರ್ನಲ್ಲಿ ಶ್ರೀಲಂಕಾ ಸರಣಿಯಲ್ಲಿ ಆರು ದಿನಗಳ ಟೆಸ್ಟ್ ಪಂದ್ಯವನ್ನು ಆಡಿತ್ತು. ಸಂಸತ್ತಿನ ಚುನಾವಣೆಗಳ ಕಾರಣಕ್ಕೆ ವಿಶ್ರಾಂತಿ ದಿನ ನೀಡಲಾಗಿತ್ತು.
ಸದ್ಯ ನ್ಯೂಝಿಲ್ಯಾಂಡ್ ಹಾಗೂ ಶ್ರೀಲಂಕಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರ್ಯಾಂಕಿಂಗ್ನಲ್ಲಿ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿವೆ.