ಭಾರತ ವಿರುದ್ಧ ಮೊದಲ ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದ ಸ್ಟಾರ್ಕ್
ಅಡಿಲೇಡ್ : ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನವಾದ ಶುಕ್ರವಾರ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಪಾಲಿಗೆ ಶುಭದಿನವಾಗಿತ್ತು. ಇನ್ಸ್ವಿಂಗ್ ಮೂಲಕ ಆರು ವಿಕೆಟ್ ಗೊಂಚಲು ಕಬಳಿಸಿದ ಸ್ಟಾರ್ಕ್ ಅವರು ಭಾರತದ ಬ್ಯಾಟರ್ಗಳಿಗೆ ಸಿಂಹಸ್ವಪ್ನರಾದರು.
ಸ್ಟಾರ್ಕ್ ಅವರು ಭಾರತದ ಪ್ರಮುಖ ಅಟಗಾರರನ್ನು ಪೆವಿಲಿಯನ್ಗೆ ಕಳುಹಿಸಿದ್ದು, ಆಸ್ಟ್ರೇಲಿಯದ ಪ್ರಮುಖ ವೇಗಿಯ ವಿರುದ್ಧ ರನ್ ಗಳಿಸಲು ಭಾರತ ತಂಡದ ಆಟಗಾರರು ಪರದಾಟ ನಡೆಸಿದರು.
ಸ್ಟಾರ್ಕ್ ಅವರು ಪಿಂಕ್ ಬಾಲ್ ಟೆಸ್ಟ್ನಲ್ಲಿ ಇಂದು ತಾನೆಸೆದ ಮೊದಲ ಎಸೆತದಲ್ಲೇ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್(0)ವಿಕೆಟನ್ನು ಉರುಳಿಸಿದರು.
ಎಡಗೈ ಬ್ಯಾಟರ್ ಜೈಸ್ವಾಲ್ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ಸ್ಟಾರ್ಕ್ ಮೊದಲು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್ ಪಡೆಗೆ ತೀವ್ರ ಹಿನ್ನಡೆ ವುಂಟು ಮಾಡಿದರು.
ಆಗ ಜೊತೆಯಾದ ಕೆ.ಎಲ್.ರಾಹುಲ್(37 ರನ್, 64 ಎಸೆತ)ಹಾಗೂ ಶುಭಮನ್ ಗಿಲ್(31 ರನ್, 51 ಎಸೆತ)ಎರಡನೇ ವಿಕೆಟ್ಗೆ 69 ರನ್ ಜೊತೆಯಾಟದಲ್ಲಿ ಭಾಗಿಯಾದರು. ಆಗ ಮತ್ತೆ ಬೌಲಿಂಗ್ ದಾಳಿಗಿಳಿದ ಸ್ಟಾರ್ಕ್ ಅವರು ಕ್ರೀಸ್ನಲ್ಲಿ ನೆಲೆವೂರಿದ್ದ ರಾಹುಲ್ ಹಾಗೂ ವಿರಾಟ್ ಕೊಹ್ಲಿ(7 ರನ್)ಅವರನ್ನು ಸತತ ಓವರ್ಗಳಲ್ಲಿ ಔಟ್ ಮಾಡಿದರು.
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ವಾಪಸಾಗಿರುವ ಗಿಲ್ ಅವರು ಬೋಲ್ಯಾಂಡ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.
ವೇಗದ ಬೌಲರ್ ಸ್ಟಾರ್ಕ್ ಟೀ ವಿರಾಮದ ನಂತರ ಮತ್ತೆ ಬೌಲಿಂಗ್ ದಾಳಿ ಮುಂದುವರಿಸಿದ್ದು, ಒಂದೇ ಓವರ್ನಲ್ಲಿ ಆರ್.ಅಶ್ವಿನ್ ಹಾಗೂ ಹರ್ಷಿತ್ ರಾಣಾ ಅವರ ವಿಕೆಟ್ಗಳನ್ನು ಉರುಳಿಸಿದರು. ಆಗ ಭಾರತ ತಂಡವು 141 ರನ್ಗೆ 8ನೇ ವಿಕೆಟ್ ಕಳೆದುಕೊಂಡಿತು.
ಸ್ಟಾರ್ಕ್ ಆ ನಂತರ ನಿತೀಶ್ ಕುಮಾರ್ ರೆಡ್ಡಿ(42 ರನ್)ವಿಕೆಟನ್ನು ಪಡೆದು ಭಾರತದ ಇನಿಂಗ್ಸ್ ಅನ್ನು 180 ರನ್ಗೆ ನಿಯಂತ್ರಿಸಿದರು. ಸ್ಟಾರ್ಕ್ ಜೀವನಶ್ರೇಷ್ಠ ಬೌಲಿಂಗ್(14.1-2-48-6)ಸಂಘಟಿಸಿದರು.
ಸ್ಟಾಕ್ ಟೆಸ್ಟ್ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿ ಭಾರತ ತಂಡದ ವಿರುದ್ಧ ಐದು ವಿಕೆಟ್ಗಳ ಗೊಂಚಲು ಕಬಳಿಸಿದರು.
ಸ್ಟಾರ್ಕ್ ಅವರು ಇದೀಗ 4ನೇ ಬಾರಿ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ವಿಶೇಷವೆಂದರೆ ಪಿಂಕ್ ಬಾಲ್ ಟೆಸ್ಟ್ನಲ್ಲಿ ಯಾವೊಬ್ಬ ಬೌಲರ್ ಕೂಡ ಎರಡಕ್ಕಿಂತ ಹೆಚ್ಚು ಬಾರಿ ಐದು ವಿಕೆಟ್ ಗೊಂಚಲು ಪಡೆದಿಲ್ಲ.
ತಲಾ ಎರಡು ವಿಕೆಟ್ಗಳನ್ನು ಪಡೆದ ನಾಯಕ ಪ್ಯಾಟ್ ಕಮಿನ್ಸ್(2-41) ಹಾಗೂ ಬೋಲ್ಯಾಂಡ್(2-54)ಅವರು ಸ್ಟಾರ್ಕ್ಗೆ ಸಾಥ್ ನೀಡಿದರು.
ಭಾರತ ತಂಡವು ಮೂರು ಬದಲಾವಣೆಗಳನ್ನು ಮಾಡಿದ್ದು, ಮೊದಲ ಟೆಸ್ಟ್ ಪಂದ್ಯದಿಂದ ವಂಚಿತರಾಗಿದ್ದ ನಾಯಕ ರೋಹಿತ್, ಗಿಲ್ ಹಾಗೂ ಅಶ್ವಿನ್ ಆಡುವ 11ರ ಬಳಗಕ್ಕೆ ವಾಪಸಾದರು. ದೇವದತ್ತ ಪಡಿಕ್ಕಲ್, ಧ್ರುವ್ ಜುರೆಲ್ ಹಾಗೂ ವಾಶಿಂಗ್ಟನ್ ಸುಂದರ್ ಈ ಮೂವರಿಗೆ ದಾರಿ ಮಾಡಿಕೊಟ್ಟರು.