ಅಮೆರಿಕ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸ್ಟುವರ್ಟ್ ಲಾ ನೇಮಕ

Update: 2024-04-18 17:41 GMT

Photo : X/@WisdenCricket

·

ಲಂಡನ್: ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಲಾ ಅಮೆರಿಕ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.

50 ಓವರ್‌ಗಳ ಪಂದ್ಯಗಳಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ್ದ ಸ್ಟುವರ್ಟ್ ಲಾ ಅವರು 1996ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ರನ್ನರ್ಸ್ ಅಪ್ ತಂಡದ ಸದಸ್ಯರಾಗಿದ್ದರು.

2000ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ 55ರ ಹರೆಯದ ಸ್ಟುವರ್ಟ್ ಲಾ ಅವರು ಕೋಚಿಂಗ್‌ನಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದರು.

ಈ ಹಿಂದೆ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ವೆಸ್ಟ್‌ಇಂಡೀಸ್ ತಂಡಗಳ ಮುಖ್ಯ ಕೋಚ್ ಆಗಿದ್ದ ಸ್ಟುವರ್ಟ್‌ಲಾ, 2023ರ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಅಂಡರ್-19 ತಂಡಗಳೊಂದಿಗೆ ಕೂಡ ಕೆಲಸ ಮಾಡಿದ್ದರು.

ಮುಂಬರುವ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿ ಹಾಗೂ ಜೂನ್‌ನಲ್ಲಿ ವೆಸ್ಟ್‌ಇಂಡೀಸ್‌ನ ಸಹ ಆತಿಥ್ಯದಲ್ಲಿ ನಡೆಯುವ ಪುರುಷರ ಟಿ-20 ವಿಶ್ವಕಪ್‌ನಲ್ಲಿ ಅಮೆರಿಕ ಕ್ರಿಕೆಟ್ ತಂಡಕ್ಕೆ ಮಾರ್ಗದರ್ಶನ ನೀಡಲು ಸಜ್ಜಾಗಿದ್ದಾರೆ.

ಭಾರೀ ಸವಾಲುಗಳು ಎದುರಿಗಿದ್ದರೂ ಅಂತರ್‌ರಾಷ್ಟ್ರೀಯ ಸ್ಪರ್ಧಾವಳಿಯಲ್ಲಿ ಅನನುಭವಿ ತಂಡಕ್ಕೆ ಮಾರ್ಗದರ್ಶನ ನೀಡುವ ಅವಕಾಶ ಲಭಿಸಿದ್ದಕ್ಕೆ ಸ್ಟುವರ್ಟ್ ಲಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಹಂತದಲ್ಲಿ ಅಮೆರಿಕ ಕ್ರಿಕೆಟ್ ತಂಡಕ್ಕೆ ಸೇರುವ ಉತ್ತಮ ಅವಕಾಶ ಲಭಿಸಿದೆ. ಕ್ರೀಡೆಯಲ್ಲಿ ಅಮೆರಿಕವು ಬಲಿಷ್ಠ ಅಸೋಸಿಯೇಟ್ ರಾಷ್ಟ್ರಗಳಲ್ಲಿ ಒಂದಾಗಿದೆ. ಬಾಂಗ್ಲಾದೇಶ ವಿರುದ್ಧದ ಸರಣಿ ಹಾಗೂ ನಂತರ ಅಮೆರಿಕದ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ತಂಡವನ್ನು ಸಜ್ಜುಗೊಳಿಸುವುದು ನಮ್ಮ ಮೊದಲ ಕಾರ್ಯವಾಗಿದೆ ಎಂದು ಲಾ ತಿಳಿಸಿದ್ದಾರೆ.

ಅಮೆರಿಕ ಕ್ರಿಕೆಟ್ ತಂಡವು ಜೂನ್ 1ರಂದು ಟೆಕ್ಸಾಸ್‌ನಲ್ಲಿ ನಡೆಯುವ ಟಿ-20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ. ಆ ನಂತರ ಪಾಕಿಸ್ತಾನ(ಜೂನ್ 6), ಭಾರತ(ಜೂನ್ 12) ಹಾಗೂ ಐರ್‌ಲ್ಯಾಂಡ್(ಜೂನ್ 14)ವಿರುದ್ಧ ಎ ಗುಂಪಿನ ಪಂದ್ಯಗಳನ್ನು ಆಡಲಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News