IPL |ಟ್ರಾವಿಡ್ ಹೆಡ್, ಅಭಿಷೇಕ್, ಶಹಬಾಝ್ ಭರ್ಜರಿ ಬ್ಯಾಟಿಂಗ್: ಡೆಲ್ಲಿ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಜಯಭೇರಿ
ಹೊಸದಿಲ್ಲಿ : ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್(89 ರನ್, 32 ಎಸೆತ) , ಅಭಿಷೇಕ್ ಶರ್ಮಾ(46 ರನ್, 12 ಎಸೆತ), ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಶಹಬಾಝ್ ಅಹ್ಮದ್(ಔಟಾಗದೆ 59, 29 ಎಸೆತ) ಭರ್ಜರಿ ಬ್ಯಾಟಿಂಗ್, ಟಿ. ನಟರಾಜನ್(4-19) ನೇತೃತ್ವದಲ್ಲಿ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 67 ರನ್ ಅಂತರದಿಂದ ಜಯ ಸಾಧಿಸಿತು..
ಶನಿವಾರ ನಡೆದ ಐಪಿಎಲ್‌ನ 35ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 266 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದಿದ್ದ ಡೆಲ್ಲಿ ತಂಡ 19.1 ಓವರ್‌ಗಳಲ್ಲಿ 199 ರನ್ ಗಳಿಸಿ ಆಲೌಟಾಗಿ ಸೋಲೊಪ್ಪಿಕೊಂಡಿತು.
ಆತಿಥೇಯ ಡೆಲ್ಲಿ ಪರ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ (65 ರನ್, 18 ಎಸೆತ, 5 ಬೌಂಡರಿ, 7 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಅಭಿಷೇಕ್ ಜುರೆಲ್(42 ರನ್, 22 ಎಸೆತ) ಹಾಗೂ ನಾಯಕ ರಿಷಭ್ ಪಂತ್(ಔಟಾಗದೆ 44, 34 ಎಸೆತ, 5 ಬೌಂಡರಿ, 1 ಸಿಕ್ಸರ್) ಒಂದಷ್ಟು ಪ್ರತಿರೋಧ ಒಡ್ಡಿದರು. ಹೈದರಾಬಾದ್ ಪರ ನಟರಾಜನ್ 4 ವಿಕೆಟ್ ಗೊಂಚಲು ಪಡೆದರೆ, ನಿತಿಶ್ ಕುಮಾರ್ (2-17) ಹಾಗೂ ಮಯಾಂಕ್ ಮರ್ಕಂಡೆ (2-26) ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮೊದಲು ಇನಿಂಗ್ಸ್ ಆರಂಭಿಸಿದ ಹೆಡ್ ಹಾಗೂ ಅಭಿಷೇಕ್ ಡೆಲ್ಲಿ ಬೌಲರ್‌ಗಳ ಮೇಲೆ ಮುಗಿಬಿದ್ದರು. ಸಿಕ್ಸರ್, ಬೌಂಡರಿಗಳ ಸುರಿಮಳೆಗೈದ ಈ ಜೋಡಿ ಕೇವಲ 5 ಓವರ್‌ಗಳಲ್ಲಿ ತಂಡದ ಮೊತ್ತವನ್ನು 100 ರನ್‌ಗೆ ತಲುಪಿಸಿತು. 6.2 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 131 ರನ್ ಸೇರಿಸಿದ ಹೆಡ್ ಹಾಗೂ ಅಭಿಷೇಕ್ ತಂಡದ ಗರಿಷ್ಠ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಅಭಿಷೇಕ್ ವಿಕೆಟನ್ನು ಕುಲದೀಪ್ ಯಾದವ್(4-55)ಆರಂಭಿಕ ಜೋಡಿಯನ್ನು ಕೊನೆಗೂ ಬೇರ್ಪಡಿಸಿದರು. ಪ್ರಸಕ್ತ ಐಪಿಎಲ್‌ನಲ್ಲಿ ಜಂಟಿ ವೇಗದ ಅರ್ಧಶತಕ ಪೂರೈಸಿದ ಹೆಡ್ 89 ರನ್‌ಗೆ ಔಟಾಗುವ ಮುನ್ನ 32 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್ ಸಿಡಿಸಿದರು.
ಶಹಬಾಝ್ ಅಹ್ಮದ್(ಔಟಾಗದೆ 59, 29 ಎಸೆತ, 2 ಬೌಂಡರಿ, 5 ಸಿಕ್ಸರ್) ಹಾಗೂ ನಿತಿಶ್ ಕುಮಾರ್ ರೆಡ್ಡಿ(37 ರನ್, 27 ಎಸೆತ) ತಂಡದ ಮೊತ್ತವನ್ನು 266ಕ್ಕೆ ತಲುಪಿಸಿದರು.
ಡೆಲ್ಲಿ ಪರ ಸ್ಪಿನ್ನರ್ ಕುಲದೀಪ್(4-55)ಯಶಸ್ವಿ ಪ್ರದರ್ಶನ ನೀಡಿದರು. ಅಕ್ಷರ್ ಪಟೇಲ್(1-29) ಹಾಗೂ ಮುಕೇಶ್ ಕುಮಾರ್(1-57)ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 266/7
(ಟ್ರಾವಿಸ್ ಹೆಡ್ 89, ಶಹಬಾಝ್ ಅಹ್ಮದ್ ಔಟಾಗದೆ 59, ಅಭಿಷೇಕ್ ಶರ್ಮಾ 46, ಕುಲದೀಪ್ ಯಾದವ್ 4-55)
ಡೆಲ್ಲಿ ಕ್ಯಾಪಿಟಲ್ಸ್:19.1 ಓವರ್‌ಗಳಲ್ಲಿ 199 ರನ್‌ಗೆ ಆಲೌಟ್
(ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ 65, ರಿಷಭ್ ಪಂತ್ 44, ಅಭಿಷೇಕ್ ಜುರೆಲ್ 42,ಟಿ. ನಟರಾಜನ್ 4-19, ನಿತಿಶ್ ಕುಮಾರ್ 2-17, ಮಯಾಂಕ್ ಮರ್ಕಂಡೆ 2-26)