ಟಿ-20 ಕ್ರಿಕೆಟ್: ಕನಿಷ್ಠ ಸ್ಕೋರ್ ಗಳಿಸಿ ನೆದರ್‌ಲ್ಯಾಂಡ್ಸ್ ದಾಖಲೆ ಸರಿಗಟ್ಟಿದ ಉಗಾಂಡ

Update: 2024-06-09 17:22 GMT

PC : NDTV 

ಪ್ರೊವಿಡೆನ್ಸ್ : ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕೇವಲ 39 ರನ್‌ಗೆ ಆಲೌಟಾಗಿರುವ ಉಗಾಂಡ ಕ್ರಿಕೆಟ್ ತಂಡ ನೆದರ್‌ಲ್ಯಾಂಡ್ಸ್ ದಾಖಲೆಯನ್ನು ಸರಿಗಟ್ಟಿದೆ. 2014ರಲ್ಲಿ ಶ್ರೀಲಂಕಾದ ವಿರುದ್ಧ ನೆದರ್‌ಲ್ಯಾಂಡ್ಸ್ ಕನಿಷ್ಠ ಸ್ಕೋರ್(39)ಗಳಿಸಿತ್ತು.

ರವಿವಾರ ಟಾಸ್ ಜಯಿಸಿದ ವೆಸ್ಟ್‌ಇಂಡೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 173 ರನ್ ಗಳಿಸಿತು. ಉಗಾಂಡ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ ವಿಂಡೀಸ್ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ದೊಡ್ಡ ಅಂತರದ (134 ರನ್) ಜಯ ದಾಖಲಿಸಿತು. 4 ಓವರ್‌ಗಳಲ್ಲಿ ಕೇವಲ 11 ರನ್‌ಗೆ ಐದು ವಿಕೆಟ್ ಕಬಳಿಸಿದ ಎಡಗೈ ಸ್ಪಿನ್ನರ್ ಅಕೀಲ್ ಹುಸೇನ್ ಉಗಾಂಡದ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣರಾದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇನಿಂಗ್ಸ್‌ನ ಎರಡನೇ ಎಸೆತದಲ್ಲಿ ಮೊದಲ ವಿಕೆಟನ್ನು ಕಳೆದುಕೊಂಡ ಉಗಾಂಡ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು 12 ಓವರ್‌ಗಳಲ್ಲಿ ತನ್ನ ಹೋರಾಟ ಕೊನೆಗೊಳಿಸಿತು. ಜುಮಾ ಮಿಯಾಗಿ(ಔಟಾಗದೆ 13, 20 ಎಸೆತ)ಉಗಾಂಡ ಪರ ಗರಿಷ್ಠ ಸ್ಕೋರ್ ಗಳಿಸಿದರು. ಅಲ್ಝಾರಿ ಜೋಸೆಫ್(2-6) ಎರಡು ವಿಕೆಟ್ ಪಡೆದು ಹುಸೇನ್‌ಗೆ ಸಾಥ್ ನೀಡಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್‌ಇಂಡೀಸ್ ತಂಡದ ಪರ ಓಪನರ್ ಜಾನ್ಸನ್ ಚಾರ್ಲ್ಸ್(44 ರನ್, 42 ಎಸೆತ)ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕ ರೋವ್‌ಮನ್ ಪೊವೆಲ್ 23 ರನ್ ಗಳಿಸಿದರೆ, ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಔಟಾಗದೆ 30 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ 4 ಬೌಂಡರಿ ಗಳಿಸಿದ ರಸೆಲ್ ಅವರು ವಿಂಡೀಸ್ ತಂಡ 5 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಲು ನೆರವಾದರು.

ಭರ್ಜರಿ ಜಯ ದಾಖಲಿಸಿರುವ ವೆಸ್ಟ್‌ಇಂಡೀಸ್ ಆತ್ಮವಿಶ್ವಾಸದೊಂದಿಗೆ ಬುಧವಾರ ನಡೆಯಲಿರುವ ನ್ಯೂಝಿಲ್ಯಾಂಡ್ ವಿರುದ್ದ ಟ್ರಿನಿಡಾಡ್‌ನಲ್ಲಿ ನಡೆಯುವ ಪಂದ್ಯಕ್ಕೆ ಸಜ್ಜಾಗಿದೆ.

ಸಂಕ್ಷಿಪ್ತ ಸ್ಕೋರ್

ವೆಸ್ಟ್‌ಇಂಡೀಸ್: 20 ಓವರ್‌ಗಳಲ್ಲಿ 173/5

(ಜಾನ್ಸನ್ ಚಾರ್ಲ್ಸ್ 44, ಆ್ಯಂಡ್ರೆ ರಸೆಲ್ ಔಟಾಗದೆ 30, ರೊವ್‌ಮನ್ ಪೊವೆಲ್ 23, ನಿಕೊಲಸ್ ಪೂರನ್ 22, ರುದರ್‌ಫೋರ್ಡ್ 22, ಬ್ರಿಯಾನ್ ಮಸಾಬಾ 2-31)

ಉಗಾಂಡ: 12 ಓವರ್‌ಗಳಲ್ಲಿ 39 ರನ್‌ಗೆ ಆಲೌಟ್

(ಜುಮಾ ಮಿಯಾಗಿ ಔಟಾಗದೆ 13, ಅಕೀಲ್ ಹುಸೇನ್ 5-11, ಅಲ್ಝಾರಿ ಜೋಸೆಫ್ 2-9)

ಪಂದ್ಯಶ್ರೇಷ್ಠ: ಅಕೀಲ್ ಹುಸೇನ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News