ಟಿ20 ವಿಶ್ವಕಪ್ ಫೈನಲ್: ಭಾರತ ತಂಡದ ಅಭ್ಯಾಸ ರದ್ದು; ಕಾರಣ ಏನು ಗೊತ್ತೇ?
ಭಾರತ ಟಿ20 ಕ್ರಿಕೆಟ್ ತಂಡ ಶನಿವಾರ ನಡೆಯಲಿರುವ ಮಹತ್ವದ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮುನ್ನಾ ದಿನವಾದ ಶುಕ್ರವಾರ ನಡೆಸಬೇಕಿದ್ದ ಅಭ್ಯಾಸವನ್ನು ರದ್ದುಪಡಿಸಿದೆ. ಬಾರ್ಬಡೋಸ್ ನ ಕೆನ್ಸಿಂಗ್ಟನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಹತ್ವದ ಫೈನಲ್ ಪಂದ್ಯ ನಡೆಯಲಿದೆ.
ಗುರುವಾರ ನಡೆದ ಸೆಮಿಫೈನಲ್ ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 68 ರನ್ ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ ಮಳೆಯ ಕಾರಣದಿಂದ ಪಂದ್ಯ ವಿಳಂಬವಾಯಿತು. ಈ ಕಾರಣದಿಂದ ಭಾರತ ಕ್ರಿಕೆಟ್ ತಂಡ ಪಂದ್ಯ ಮುಗಿದ ಬಳಿಕ ನೇರವಾಗಿ ಬಾರ್ಬಡೋಸ್ಗೆ ಹೊರಡಬೇಕಾಯಿತು. ಈ ಕಾರಣದಿಂದ ಭಾರತೀಯ ತಂಡದ ವ್ಯವಸ್ಥಾಪಕರು, ತಂಡದ ಪ್ರಾಕ್ಟೀಸ್ ಸೆಷನ್ ರದ್ದುಪಡಿಸಲು ನಿರ್ಧರಿಸಿದರು.
"ಭಾರತೀಯ ತಂಡ ಅಭ್ಯಾಸವನ್ನು ರದ್ದುಪಡಿಸಿದೆ" ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಣೆಯಲ್ಲಿ ತಿಳಿಸಿದೆ. ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯನ್ನು ಭಾರತ ಗಯಾನಾದಲ್ಲಿ ಪೂರೈಸಿದೆ ಎಂದೂ ಪ್ರಕಟಣೆ ವಿವರಿಸಿದೆ.
ಇನ್ನೊಂದೆಡೆ ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿ ಫೈನಲ್ ತಲುಪಿರುವ ಆಫ್ರಿಕಾ ತಂಡ ಐಚ್ಛಿಕ ಅಭ್ಯಾಸವನ್ನು ಮತ್ತು ಪತ್ರಿಕಾಗೋಷ್ಠಿಯನ್ನು ನಡೆಸಲಿದೆ. ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಅಭ್ಯಾಸ ನಡೆಸಲಿದೆ. ಮಧ್ಯಾಹ್ನ 1 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದೆ ಎಂದು ಪ್ರಕಟಣೆ ವಿವರಿಸಿದೆ.
ವಿಶ್ವಕಪ್ ಫೈನಲ್ ಗೆ ಮಳೆ ಅಡಚಣೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪಂದ್ಯದ ಅವಧಿಯಲ್ಲಿ ಶೇಕಡ 99ರಷ್ಟು ಮೋಡ ಮುಸುಕಿದ ವಾತಾವರಣ ಇರಲಿದೆ ಹಾಗೂ ಮಳೆ ಬರುವ ಸಾಧ್ಯತೆ ಶೇಕಡ 60ರಷ್ಟಿದೆ ಎಂದು ಅಕ್ಯೂವೆದರ್ ಅಂದಾಜಿಸಿದೆ. ಶನಿವಾರ ಪಂದ್ಯ ನಡೆಯಲು ಸಾಧ್ಯವಾಗದಿದ್ದರೆ, ಭಾನುವಾರ ಮೀಸಲು ದಿನವಾಗಿರುತ್ತದೆ. ಆದರೆ ಭಾನುವಾರ ಕೂಡಾ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಎರಡೂ ದಿನ ಪಂದ್ಯ ನಡೆಯಲು ಸಾಧ್ಯವಾಗದಿದ್ದರೆ, ಭಾರತ ಹಾಗೂ ದಕ್ಷಿಣ ಆಫ್ರಿಕಾವನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.