ಟಿ20 ವಿಶ್ವಕಪ್ | ನಾಳೆ ಬಾಂಗ್ಲಾದೇಶದ ವಿರುದ್ಧ ಭಾರತದ ಅಭ್ಯಾಸ ಪಂದ್ಯ
ನ್ಯೂಯಾರ್ಕ್ : ಐರ್ಲ್ಯಾಂಡ್ ವಿರುದ್ಧ ಜೂನ್ 5ರಂದು ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯವನ್ನು ಆಡುವುದಕ್ಕಿಂತ ಮುಂಚಿತವಾಗಿ ಟೀಮ್ ಇಂಡಿಯಾ ಶನಿವಾರ ಬಾಂಗ್ಲಾದೇಶ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನಾಡಲು ಸಜ್ಜಾಗಿದೆ.
ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ಹೊರತುಪಡಿಸಿ ಎಲ್ಲ 14 ಆಟಗಾರರಿಗೆ ಆಡುವ ಅವಕಾಶ ನೀಡಲಾಗುತ್ತದೆ. ಕೊಹ್ಲಿ ಪ್ರಾಕ್ಟೀಸ್ ಪಂದ್ಯಕ್ಕಿಂತ ಮೊದಲು ಅಮೆರಿಕಕ್ಕೆ ಆಗಮಿಸುವ ನಿರೀಕ್ಷೆ ಇದೆ. ತಂಡದ ಹೆಚ್ಚಿನ ಆಟಗಾರರು ಎರಡು ವಾರಗಳ ವಿಶ್ರಾಂತಿ ಪಡೆದಿದ್ದು ಅಭ್ಯಾಸ ಪಂದ್ಯವು ಪ್ರತಿ ಆಟಗಾರರ ಫಾರ್ಮ್ ಅನ್ನು ಪರಿಶೀಲನೆ ನಡೆಸಲು ಅನುವು ಮಾಡಲಿದೆ.
ನಾಯಕ ರೋಹಿತ್ ಶರ್ಮಾ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಎರಡು ನಿರ್ಣಾಯಕ ನಿರ್ಧಾರ ಕೈಗೊಳ್ಳಬೇಕಾಗಿದೆ. ಯಶಸ್ವಿ ಜೈಸ್ವಾಲ್ ಉತ್ತಮ ಫಾರ್ಮ್ನಲ್ಲಿದ್ದರೂ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಸವಾಲಿನದ್ದಾಗಿದೆ. ಜೈಸ್ವಾಲ್ರನ್ನು ಸೇರಿಸಿಕೊಂಡರೆ ಶಿವಂ ದುಬೆ ಅವರಂತಹ ಪವರ್ಹಿಟ್ಟರ್ಗಳು ಆಡುವ 11ರ ಬಳಗದಿಂದ ಹೊರಗುಳಿಯಲಿದ್ದಾರೆ.
ಜೈಸ್ವಾಲ್ರನ್ನು ಹೊರಗಿಟ್ಟು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಇನಿಂಗ್ಸ್ ಆರಂಭಿಸಲು ಅವಕಾಶ ಮಾಡಿಕೊಡುವ ಸಾಧ್ಯತೆಯಿದೆ. ಈ ನಿರ್ಧಾರವು ದುಬೆಗೆ ಟೂರ್ನಮೆಂಟ್ನಲ್ಲಿ ಆಡುವ ಅವಕಾಶ ಕಲ್ಪಿಸಬಹುದು.
ಜಸ್ಪ್ರೀತ್ ಬುಮ್ರಾ ಅವರ ವೇಗದ ಬೌಲಿಂಗ್ ಜೊತೆಗಾರನನ್ನು ಗುರುತಿಸುವುದು ಭಾರತಕ್ಕಿರುವ ಎರಡನೇ ಸವಾಲಾಗಿದೆ. ಅರ್ಷದೀಪ್ ಸಿಂಗ್ ಹಾಗೂ ಮುಹಮ್ಮದ್ ಸಿರಾಜ್ ಐಪಿಎಲ್ನಲ್ಲಿ ಅಸ್ಥಿರ ಪ್ರದರ್ಶನ ನೀಡಿದ್ದಾರೆ. ಈ ಇಬ್ಬರರ ಪ್ರದರ್ಶನವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.
ಹಾರ್ದಿಕ್ ಪಾಂಡ್ಯ ಅವರ 4 ಓವರ್ ನಿರ್ಣಾಯಕ. ನ್ಯೂಯಾರ್ಕ್ನ ಹೊಸ ಪಿಚ್ನಲ್ಲಿ ಅರ್ಷದೀಪ್ ಸಿಂಗ್ ಎರಡನೇ ಪ್ರಮುಖ ವೇಗದ ಬೌಲರ್ ಆಗಬೇಕು ಎಂದು ಮೊದಲ ಆವೃತ್ತಿಯ ವಿಶ್ವಕಪ್ನಲ್ಲಿ ಭಾರತದ ಗೆಲುವಿಗೆ ಕಾರಣವಾಗಿದ್ದ ಆಟಗಾರ ಆರ್.ಪಿ. ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ವೇಗಿಗಳಿಗೆ ಹೆಚ್ಚು ನೆರವಾಗದ ಪಿಚ್ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸುವಾಗ ಭಾರತದ ಮಧ್ಯಮ ಸರದಿಯ ಬ್ಯಾಟರ್ಗಳು ಸ್ಪಿನ್ದ್ವಯರಾದ ಶಾಕಿಬ್ ಅಲ್ ಹಸನ್ ಹಾಗೂ ಮಹೆದಿ ಹಸನ್ರಿಂದ ಹೆಚ್ಚು ಪರೀಕ್ಷೆಗೆ ಒಳಗಾಗಲಿದ್ದಾರೆ. ವೇಗದ ಬೌಲರ್ ಮುಸ್ತಫಿಝರ್ರಹ್ಮಾನ್ ಅವರ ಬೌಲಿಂಗ್ಗೆ ಉತ್ತರಿಸಬೇಕಾದ ಅಗತ್ಯವೂ ಇದೆ.
ಪಂದ್ಯ ಆರಂಭದ ಸಮಯ: ರಾತ್ರಿ 8:00