ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡದ ನಾಯಕತ್ವ ತ್ಯಜಿಸಿದ ತಮೀಮ್ ಇಕ್ಬಾಲ್, ಏಶ್ಯಕಪ್‌ಗೆ ಡೌಟ್

Update: 2023-08-04 15:14 GMT

ತಮೀಮ್ ಇಕ್ಬಾಲ್, ಫೋಟೋ: PTI

ಹೊಸದಿಲ್ಲಿ: ತನ್ನನ್ನು ಕಾಡುತ್ತಿರುವ ಬೆನ್ನುನೋವಿನ ಕಾರಣಕ್ಕೆ ಎಡಗೈ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡ ನಾಯಕತ್ವದ ಸ್ಥಾನವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಮುಂಬರುವ ಏಶ್ಯಕಪ್‌ನಿಂದಲೂ ದೂರ ಉಳಿಯಲಿದ್ದಾರೆ.

ಪಾಕಿಸ್ತಾನ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಈ ವರ್ಷದ ಆಗಸ್ಟ್ 30ರಿಂದ ಸೆಪ್ಟಂಬರ್ 17ರ ತನಕ ನಡೆಯುವ ಕಾಂಟಿನೆಂಟಲ್ ಏಕದಿನ ಟೂರ್ನಿ ಏಶ್ಯಕಪ್‌ನಲ್ಲಿ ಬಾಂಗ್ಲಾದೇಶ ತಂಡ ಹೊಸ ನಾಯಕತ್ವದಲ್ಲಿ ಮುನ್ನಡೆಯಲಿದೆ.

34ರ ಹರೆಯದ ಇಕ್ಬಾಲ್ ಅಫ್ಘಾನಿಸ್ತಾನ ವಿರುದ್ಧ ಸ್ವದೇಶದಲ್ಲಿ ಇತ್ತೀಚೆಗೆ ನಡೆದ ಸರಣಿಯ ವೇಳೆ ಏಕದಿನ ಕ್ರಿಕೆಟ್‌ನಿಂದ ದಿಢೀರನೆ ನಿವೃತ್ತಿ ಪ್ರಕಟಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ನಂತರ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಮಧ್ಯಪ್ರವೇಶಿಸಿದ ನಂತರ ನಿವೃತ್ತಿ ನಿರ್ಧಾರ ಹಿಂಪಡೆದಿದ್ದರು.

ನ್ಯೂಝಿಲ್ಯಾಂಡ್ ವಿರುದ್ಧ ಸರಣಿಯ ವೇಳೆಗೆ ಫಾರ್ಮ್‌ಗೆ ಮರಳುವತ್ತ ಚಿತ್ತಹರಿಸಿರುವ ಇಕ್ಬಾಲ್ ತನ್ನ ಫಾರ್ಮ್‌ನ್ನು ಮರಳಿ ಪಡೆದು ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಇಟ್ಟುಕೊಂಡಿದ್ದಾರೆ.

ನಾನು ನಾಯಕನ ಸ್ಥಾನದಿಂದ ಕೆಳಗಿಳಿಯುವೆ ಹಾಗೂ ಆಟಗಾರನಾಗಿ ಬ್ಯಾಟಿಂಗ್‌ನತ್ತ ಹೆಚ್ಚು ಗಮನ ಹರಿಸುವೆ. ಅವಕಾಶ ಸಿಕ್ಕಾಗಲೆಲ್ಲಾ ತಂಡಕ್ಕೆ ನನ್ನಿಂದಾದ ಕೊಡುಗೆ ನೀಡುವೆ. ಗಾಯ ಒಂದು ಸಮಸ್ಯೆ ಎಂದು ನನಗೆ ಗೊತ್ತಿದೆ. ಕ್ರಿಕೆಟ್‌ ಮಂಡಳಿಗೆ ನನ್ನ ಸಮಸ್ಯೆಯನ್ನು ತಿಳಿಸಿರುವೆ. ನಾನು ಯಾವಾಗಲೂ ಎಲ್ಲಕ್ಕಿಂತ ತಂಡವೇ ಮೇಲು ಎಂದು ನಂಬಿರುವೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ನಾಯಕನ ಸ್ಥಾನ ತ್ಯಜಿಸಲು ನಿರ್ಧರಿಸಿದ್ದೇನೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಮೀಮ್ ಇಕ್ಬಾಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News