ಪ್ಯಾರಿಸ್ ಒಲಿಂಪಿಕ್ಸ್ ಸಿದ್ಧತೆಗಳನ್ನು ಪರಿಶೀಲಿಸಿದ ನೂತನ ಕ್ರೀಡಾ ಸಚಿವ

Update: 2024-06-13 16:49 GMT

ಮನ್‍ಸುಖ್ ಮಂಡಾವಿಯ | PTI 

ಹೊಸದಿಲ್ಲಿ : ಭಾರತದ ನೂತನ ಕ್ರೀಡಾ ಸಚಿವ ಮನ್‍ಸುಖ್ ಮಂಡಾವಿಯ ಗುರುವಾರ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ (ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಅವರ ಜೊತೆ ಸಭೆ ನಡೆಸಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತದ ತಯಾರಿಯ ಪರಿಶೀಲನೆ ನಡೆಸಿದ್ದಾರೆ.

2024ರ ಒಲಿಂಪಿಕ್ಸ್ ಕ್ರೀಡಾಕೂಟ ಪ್ಯಾರಿಸ್‍ನಲ್ಲಿ ಜುಲೈ-ಆಗಸ್ಟ್ ನಲ್ಲಿ ನಡೆಯಲಿದೆ.

ಭಾರತದಿಂದ 100ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ವಿಶ್ವಾಸವನ್ನು ಈ ಸಂದರ್ಭದಲ್ಲಿ ಉಷಾ ವ್ಯಕ್ತಪಡಿಸಿದರು.

ಮಂಗಳವಾರ ಕ್ರೀಡಾ ಖಾತೆಯನ್ನು ಅನುರಾಗ್ ಠಾಕೂರ್ ರಿಂದ ವಹಿಸಿಕೊಂಡ ಮಂಡಾವಿಯ, ಉಷಾ ಸೇರಿದಂತೆ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್‍ನ ಉನ್ನತ ಅಧಿಕಾರಿಗಳನ್ನು ಹೊಸದಿಲ್ಲಿಯಲ್ಲಿರುವ ಐಒಎ ಭವನದಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಕ್ರೀಡಾ ಖಾತೆಯ ನೂತನ ಸಹಾಯಕ ಸಚಿವ ರಕ್ಷಾ ಖಡ್ಸೆ, ಕ್ರೀಡಾ ಕಾರ್ಯದರ್ಶಿ ಸುಜಾತಾ ಚತುರ್ವೇದಿ, ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ ಸಂದೀಪ್ ಪ್ರಧಾನ್ ಹಾಗೂ ಇತರರು ಉಪಸ್ಥಿತರಿದ್ದರು.

ಈ ಸಭೆಯಲ್ಲಿ, ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಭಾರತ ನಡೆಸಿರುವ ತಯಾರಿಯ ಬಗ್ಗೆ ಕ್ರೀಡಾ ಸಚಿವರಿಗೆ ಮಾಹಿತಿ ನೀಡಲಾಯಿತು.

“ಇಂದು ನಾನು ಐಒಎ ಅಧಿಕಾರಿಗಳನ್ನು ಭೇಟಿಯಾದೆ. ಪ್ಯಾರಿಸ್ ಒಲಿಂಪಿಕ್ಸ್‍ಗೆ ಭಾರತ ನಡೆಸುತ್ತಿರುವ ತಯಾರಿಗಳ ಬಗ್ಗೆ ಅವರು ನನಗೆ ವಿವರಗಳನ್ನು ನೀಡಿದರು. ಸಾಧ್ಯವಿರುವ ಎಲ್ಲಾ ನೆರವನ್ನು ನೀಡಲು ಸರಕಾರ ಬದ್ಧವಾಗಿದೆ’’ ಎಂದು ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮಾಂಡವೀಯ ಹೇಳಿದರು.

ಕ್ರೀಡಾ ಸಚಿವರೊಂದಿಗೆ ನಡೆದ ಸಭೆಯ ಬಗ್ಗೆ ಪಿ.ಟಿ. ಉಷಾ ತೃಪ್ತಿ ವ್ಯಕ್ತಪಡಿಸಿದರು.

“ಇಂದು ಕ್ರೀಡಾ ಸಚಿವರು ಸಹಾಯಕ ಕ್ರೀಡಾ ಸಚಿವರೊಂದಿಗೆ ನಮ್ಮ ಐಓಎಗೆ ಭೇಟಿ ನೀಡಿದರು. ಐಒಎ ಬಗ್ಗೆ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ ನ ಸಿದ್ಧತೆಗಳ ಬಗ್ಗೆ ಅವರು ತಿಳಿಯಲು ಬಯಸಿರುವುದನ್ನು ಕಂಡು ನನಗೆ ಸಂತೋಷವಾಗಿದೆ. ಈ ಬಾರಿ ನಾವು ಎಲ್ಲವನ್ನೂ ಚೆನ್ನಾಗಿ ಮಾಡಿದ್ದೇವೆ. ನಾನು ಅವರಿಗೆ ಎಲ್ಲಾ ವಿಷಯಗಳನ್ನು ವಿವರಿಸಿದ್ದೇನೆ. ನಾವು ಇನ್ನು ಪ್ರತಿ ವಾರವೂ ಸಂಪರ್ಕದಲ್ಲಿರುತ್ತೇವೆ. ಇದರ ಪ್ರಯೋಜನ ನಮ್ಮ ಒಲಿಂಪಿಕ್ ಅತ್ಲೀಟ್‍ಗಳಿಗೆ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂದು ಉಷಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News