ಇಂದು ಮೂರನೇ ಏಕದಿನ ಪಂದ್ಯ: ಸರಣಿ ಗೆಲುವಿಗಾಗಿ ಭಾರತ-ವಿಂಡೀಸ್ ಹೋರಾಟ
ಹೊಸದಿಲ್ಲಿ: ವೆಸ್ಟ್ಇಂಡೀಸ್ ವಿರುದ್ಧ ಸರಣಿ ನಿರ್ಣಾಯಕ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಭಾರತ ಸಜ್ಜಾಗಿದ್ದು, ಎಲ್ಲರ ಚಿತ್ತ ಮಧ್ಯಮ ಕ್ರಮಾಂಕದ ಬ್ಯಾಟರ್ ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ ಅವರತ್ತ ನೆಟ್ಟಿದೆ. ಬಾರ್ಬಡೋಸ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆರು ವಿಕೆಟ್ಗಳ ಅಂತರದಿಂದ ಸೋತಿರುವ ಭಾರತವು ತನ್ನ ಹೊಸ ಬ್ಯಾಟಿಂಗ್ ಕ್ರಮಾಂಕದ ಮೂಲಕ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.
‘‘ನಾವು ಯಾವಾಗಲೂ ಮುಂದಿನ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡುತ್ತೇವೆ. ಏಶ್ಯಕಪ್ ಹಾಗೂ ವರ್ಲ್ಡ್ ಕಪ್ ಸರದಿಯಲ್ಲಿದ್ದು, ಕೆಲವು ಆಟಗಾರರು ಗಾಯಗೊಂಡಿದ್ದಾರೆ. ನಾವು ಕೇವಲ ಒಂದು ಪಂದ್ಯ, ಕೇವಲ ಒಂದು ಸರಣಿಯ ಕುರಿತು ಚಿಂತಿತವಾಗಿಲ್ಲ. ನಾವು ಹಾಗೆ ಮಾಡಿದರೆ ತಪ್ಪಾಗುತ್ತದೆ’’ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಒತ್ತಿ ಹೇಳಿದ್ದಾರೆ.
ಸರಣಿ ನಿರ್ಣಾಯಕ ಪಂದ್ಯವು ಸ್ಯಾಮ್ಸನ್ಗೆ ತನ್ನ ಸಾಮರ್ಥ್ಯ ಪ್ರದರ್ಶನಕ್ಕಿರುವ ಸುವರ್ಣಾ ವಕಾಶವಾಗಿದೆ. ಹಲವು ಬಾರಿ ತಂಡಕ್ಕೆ ಪುನರಾಗಮನ ಮಾಡಿದ್ದರೂ ಸ್ಯಾಮ್ಸನ್ ಇನ್ನಷ್ಟೇ ಗಮನಾರ್ಹ ಪ್ರದರ್ಶನ ನೀಡಬೇಕಾಗಿದೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಸ್ಯಾಮ್ಸನ್ಗೆ ಮಿಂಚುವ ಅವಕಾಶವಿದೆ.
ಓಪನರ್ ಇಶಾನ್ ಕಿಶನ್ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ನಲ್ಲಿ ಮಿಂಚಿದ್ದು, ಶುಭಮನ್ ಗಿಲ್ ವಿಂಡೀಸ್ ಪ್ರವಾಸದಲ್ಲಿ ರನ್ ಗಳಿಸಲು ಯತ್ನಿಸಿದ್ದಾರೆ. ಭಾರತದ ನಿರ್ಣಾಯಕ ಪಂದ್ಯದಲ್ಲಿ ಗೆಲುವು ದಾಖಲಿಸಲು ಈ ಇಬ್ಬರು ಆಟಗಾರರು ಮುಖ್ಯವಾಗಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ಬೌಲಿಂಗ್ನ್ನು ಆರಂಭಿಸಿದ್ದ ಹಾರ್ದಿಕ್ ಪಾಂಡ್ಯ ತನ್ನ ಬ್ಯಾಟಿಂಗ್ ಫಾರ್ಮ್ನ್ನು ಉತ್ತಮಪಡಿಸುವ ಗುರಿ ಇಟ್ಟುಕೊಂಡಿದ್ದಾರೆ. ವೆಸ್ಟ್ಇಂಡೀಸ್ ವಿರುದ್ಧದ ನಿರ್ಣಾಯಕ ಐದು ಪಂದ್ಯಗಳ ಟ್ವೆಂಟಿ-20 ಸರಣಿಗಿಂತ ಮೊದಲು ಒಂದಷ್ಟು ರನ್ ಗಳಿಸಬೇಕಾಗಿದೆ.
ಬೌಲಿಂಗ್ ವಿಭಾಗದಲ್ಲಿ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್ ಸರಣಿಯಲ್ಲಿ ಇನ್ನಷ್ಟೇ ಆಡುವ ಅವಕಾಶ ಪಡೆಯಬೇಕಾಗಿದೆ. ಇದೇ ವೇಳೆ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತನ್ನ ಉತ್ತಮ ಸ್ನೇಹಿತ ಯಜುವೇಂದ್ರ ಚಹಾಲ್ರೊಂದಿಗೆ ಆಡುವ 11ರ ಬಳಗದಲ್ಲಿ ಪೈಪೋಟಿ ನಡೆಸಲಿದ್ದಾರೆ.
ವೆಸ್ಟ್ಇಂಡೀಸ್ ತಂಡ ಭಾರತ ವಿರುದ್ಧ ಸರಣಿ ಗೆಲ್ಲುವ ಒತ್ತಡವನ್ನು ಎದುರಿಸುತ್ತಿದೆ. ವಿಂಡೀಸ್ 2006ರಿಂದ ಈ ಸಾಧನೆಯನ್ನು ಮಾಡಿಲ್ಲ. ನಾಯಕ ಶಾಯ್ ಹೋಪ್ 2ನೇ ಏಕದಿನ ಪಂದ್ಯದಲ್ಲಿ ಔಟಾಗದೆ 63 ರನ್ ಗಳಿಸಿ ತಂಡದ ವಿಶ್ವಾಸವನ್ನು ಹೆಚ್ಚಿಸಿದ್ದಾರೆ. ದ್ವಿತೀಯ ಪಂದ್ಯವನ್ನು ಗೆದ್ದಿರುವ ವೆಸ್ಟ್ ಇಂಡೀಸ್ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಭಾರತವು ಮತ್ತೊಮ್ಮೆ ರೋಹಿತ್ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಬಹುದು.