ಮೂರನೇ ಏಕದಿನ ಪಂದ್ಯ: ವೆಸ್ಟ್‌ಇಂಡೀಸ್ ಗೆ 352 ರನ್ ಗಳ ಕಠಿಣ ಸವಾಲು ನೀಡಿದ ಭಾರತ
ಟರೌಬಾ: ಆರಂಭಿಕ ಬ್ಯಾಟರ್ ಶುಭಮನ್ ಗಿಲ್ (85 ರನ್, 92 ಎಸೆತ,11 ಬೌಂಡರಿ) ಇಶಾನ್ ಕಿಶನ್ (77 ರನ್, 64 ಎಸೆತ, 8 ಬೌಂಡರಿ, 3 ಸಿಕ್ಸರ್) , ನಾಯಕ ಹಾರ್ದಿಕ್ ಪಾಂಡ್ಯ(ಔಟಾಗದೆ 70, 52 ಎಸೆತ, 4 ಬೌಂಡರಿ, 5 ಸಿಕ್ಸರ್) ಹಾಗೂ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್(51 ರನ್, 41 ಎಸೆತ, 2 ಬೌಂಡರಿ, 4 ಸಿಕ್ಸರ್) ಅರ್ಧಶತಕಗಳ ಕೊಡುಗೆಯ ಸಹಾಯದಿಂದ ಭಾರತ ಕ್ರಿಕೆಟ್ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 351 ರನ್ ಗಳಿಸಿದೆ.
ಮಂಗಳವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತಕ್ಕೆ ಇಶಾನ್ ಕಿಶನ್ ಹಾಗೂ ಗಿಲ್ ಮೊದಲ ವಿಕೆಟ್‌ಗೆ 143 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು. ಕಿಶನ್ ಹಾಗೂ ಋತುರಾಜ್ ಗಾಯಕ್ವಾಡ್(8ರನ್)ಬೆನ್ನುಬೆನ್ನಿಗೆ ಔಟಾದರು. ಆಗ 3ನೇ ವಿಕೆಟ್‌ಗೆ 69 ರನ್ ಜೊತೆಯಾಟದಲ್ಲಿ ಭಾಗಿಯಾದ ಗಿಲ್ ಹಾಗೂ ಸ್ಯಾಮ್ಸನ್ ತಂಡವನ್ನು ಆಧರಿಸಿದರು.
51 ಎಸೆತಗಳಲ್ಲಿ 6ನೇ ಏಕದಿನ ಅರ್ಧಶತಕ ಸಿಡಿಸಿದ್ದ ಶತಕ ಗಳಿಸುವ ವಿಶ್ವಾಸದಲ್ಲಿದ್ದರು. ಆದರೆ ಗುಡಕೇಶ್ ಇದಕ್ಕೆ ಅಡ್ಡಿಯಾದರು. ಸಂಜು ಸ್ಯಾಮ್ಸನ್ 39 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿ ಸಹಾಯದಿಂದ 3ನೇ ಅರ್ಧಶತಕ ಗಳಿಸಿದ ಬೆನ್ನಿಗೇ ರೋಮಾರಿಯೊಗೆ ವಿಕೆಟ್ ಒಪ್ಪಿಸಿದರು.
ಸೂರ್ಯಕುಮಾರ್ ಯಾದವ್(35 ರನ್) ಹಾಗೂ ನಾಯಕ ಪಾಂಡ್ಯ 5ನೇ ವಿಕೆಟ್‌ಗೆ 65 ರನ್ ಸೇರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಆಲ್‌ರೌಂಡರ್ ರವೀಂದ್ರ ಜಡೇಜ ಔಟಾಗದೆ 8 ರನ್ ಗಳಿಸಿದ್ದಾರೆ. ವಿಂಡೀಸ್ ಪರ ರೋಮಾರಿಯೊ ಶೆಫರ್ಡ್(2-73)ಯಶಸ್ವಿ ಪ್ರದರ್ಶನ ನೀಡಿದರು. ಗುಡಕೇಶ್ ಮೊಟೀ(1-38),ಯಾನಿಕ್(1-58) ಹಾಗೂ ಅಲ್ಝಾರಿ ಜೋಸೆಫ್(1-77)ತಲಾ ಒಂದು ವಿಕೆಟ್ ಪಡೆದರು.