ಟೈಮ್ಡ್ ಔಟ್: ಅಂಪಯರ್‌ಗಳ ನಿರ್ಧಾರ ಸರಿಯಾಗಿಯೇ ಇದೆ: ಎಮ್‌ಸಿಸಿ

Update: 2023-11-11 17:19 GMT

Photo credit: cricketworldcup.com

ಮುಂಬೈ : ಶ್ರೀಲಂಕಾದ ಬ್ಯಾಟರ್ ಆ್ಯಂಜೆಲೊ ಮ್ಯಾಥ್ಯೂಸ್‌ರಿಗೆ ‘ಟೈಮ್ಡ್ ಔಟ್’ ನೀಡಿರುವ ಐಸಿಸಿ ಅಂಪಯರ್‌ಗಳ ನಿರ್ಧಾರ ಸರಿಯಾಗಿಯೇ ಇದೆ ಎಂದು ‘ಕ್ರಿಕೆಟ್ ಕಾನೂನುಗಳ’ ಕಾವಲುಗಾರ ಎಂಬ ಬಿರುದು ಹೊತ್ತಿರುವ ಮ್ಯಾರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಮ್‌ಸಿಸಿ) ಶನಿವಾರ ಹೇಳಿದೆ.

ಪಂದ್ಯದ ಅಂಪಯರ್‌ಗಳು ತನಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಮ್ಯಾಥ್ಯೂಸ್ ಸಲ್ಲಿಸಿರುವ ವೀಡಿಯೊ ಪುರಾವೆ ಸಹಿತ ದೂರಿನ ಪರಿಶೀಲನೆ ನಡೆಸಿದ ಎಮ್‌ಸಿಸಿ ತನ್ನ ಈ ನಿರ್ಧಾರವನ್ನು ಪ್ರಕಟಿಸಿದೆ.

ಹೊಸದಿಲ್ಲಿಯಲ್ಲಿ ಸೋಮವಾರ ನಡೆದ ಬಾಂಗ್ಲಾದೇಶ ವಿರುದ್ಧದ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾದ ಮ್ಯಾಥ್ಯೂಸ್ ಇನಿಂಗ್ಸ್ ಆರಂಭಿಸುವ ಮೊದಲೇ ‘ಟೈಮ್ಡ್ ಔಟ್’ ಆಗಿದ್ದಾರೆ ಎಂಬುದಾಗಿ ಮೈದಾನದ ಅಂಪಯರ್ ತೀರ್ಪು ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಶ್ರೀಲಂಕಾ ಇನಿಂಗ್ಸ್‌ನಲ್ಲಿ ಸದೀರ ಸಮರವಿಕ್ರಮ ಔಟಾದ ಬಳಿಕ, ಮುಂದಿನ ಎಸೆತವನ್ನು ಎದುರಿಸಲು 2 ನಿಮಿಷಗಳ ಒಳಗೆ ಮ್ಯಾಥ್ಯೂಸ್ ಕ್ರೀಸ್‌ನಲ್ಲಿ ಇರಬೇಕಾಗಿತ್ತು. ಆದರೆ, ಅವರ ಹೆಲ್ಮೆಟ್‌ನಲ್ಲಿ ಸಮಸ್ಯೆ ಇದ್ದುದರಿಂದ ಸರಿಯಾದ ಸಮಯಕ್ಕೆ ಅವರಿಗೆ ಕ್ರೀಸ್‌ಗೆ ಬರಲು ಸಾಧ್ಯವಾಗಲಿಲ್ಲ. ಆಗ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್‌ರ ಮನವಿಯನ್ನು ಪುರಸ್ಕರಿಸಿದ ಅಂಪಯರ್, ಮ್ಯಾಥ್ಯೂಸ್ ಔಟಾಗಿದ್ದಾರೆ ಎಂದು ತೀರ್ಪು ನೀಡಿದರು. ಈ ಮೂಲಕ, ಕ್ರಿಕೆಟ್ ಇತಿಹಾಸದಲ್ಲಿ ಟೈಮ್ಡ್ ಔಟ್ ಆದ ಮೊದಲ ಕ್ರಿಕೆಟಿಗ ಅವರಾದರು.

ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ, ಓರ್ವ ಬ್ಯಾಟರ್ ಔಟಾದ ಅಥವಾ ನಿವೃತ್ತಿಗೊಂಡ ಬಳಿಕ ಮುಂದಿನ ಎಸೆತವನ್ನು ಎದುರಿಸಲು ನೂತನ ಬ್ಯಾಟರ್ ಎರಡು ನಿಮಿಷಗಳ ಒಳಗೆ ಕ್ರೀಸ್‌ನಲ್ಲಿ ಇರಬೇಕು ಎಂಬ ಐಸಿಸಿಯ ಏಕದಿನ ಆಟದ ನಿಯಮದತ್ತ ಎಮ್‌ಸಿಸಿ ಬೆಟ್ಟು ಮಾಡಿದೆ.

ಹೆಲ್ಮೆಟ್ ಬದಲಾವಣೆಯ ಬಗ್ಗೆ ಮ್ಯಾಥ್ಯೂಸ್ ಎರಡು ನಿಮಿಷಗಳ ಕಾಲಾವಧಿಯ ಒಳಗೆ ಅಂಪಯರ್‌ಗಳಿಗೆ ಮಾಹಿತಿ ನೀಡಿರಲಿಲ್ಲ ಎಂದು ಎಮ್‌ಸಿಸಿ ಅಭಿಪ್ರಾಯಪಟ್ಟಿದೆ.

‘‘ಮಹತ್ವದ, ಸಮರ್ಥನೀಯ, ಪರಿಕರ ಸಂಬಂಧಿ ವಿಳಂಬದ ಬಗ್ಗೆ ಎರಡು ನಿಮಿಷಗಳ ಕಾಲಾವಧಿಯ ಒಳಗೆ ಅಂಪಯರ್‌ಗಳಿಗೆ ಮಾಹಿತಿ ನೀಡಿದ್ದರೆ, ಅವರು ಅದನ್ನು ಹೊಸ ನಮೂನೆಯ ವಿಳಂಬ ಎಂಬುದಾಗಿ ಪರಿಗಣಿಸಬಹುದಾಗಿತ್ತು. ಎರಡು ನಿಮಿಷಗಳು ಕಳೆದ ಬಳಿಕವಷ್ಟೇ ಅಂಪಯರ್‌ಗಳು ವಿಳಂಬದ ಬಗ್ಗೆ ನಿರ್ಧಾರ ತೆಗೆದುಕೊಂಡರು ಎಂಬುದನ್ನು ಗಮನಿಸಬೇಕು. ಮನವಿ ಸಲ್ಲಿಸುವ ಮೊದಲು ಹೆಚ್ಚುವರಿ ಸಮಯಕ್ಕೆ ಕೋರಿಕೆ ಸಲ್ಲಿಸಲಾಗಿರಲಿಲ್ಲ’’ ಎಂದು ಎಮ್‌ಸಿಸಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News