"ಟ್ರಾವಿಸ್ ಹೆಡ್ ಹೇಳಿರುವುದು ಸುಳ್ಳು": ಆವೇಶದ ‘ಸೆಂಡ್-ಆಫ್’ ಬಗ್ಗೆ ಮೌನ ಮುರಿದ ಸಿರಾಜ್
ಅಡಿಲೇಡ್: ಅಡಿಲೇಡ್ ಓವಲ್‌ನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ತನ್ನ ಮತ್ತು ಆಸ್ಟ್ರೇಲಿಯ ಬ್ಯಾಟರ್ ಟ್ರಾವಿಸ್ ಹೆಡ್ ನಡುವಿನ ಸಂಘರ್ಷದ ಬಗ್ಗೆ ಭಾರತೀಯ ವೇಗಿ ಮುಹಮ್ಮದ್ ಸಿರಾಜ್ ಮೌನ ಮುರಿದಿದ್ದಾರೆ. ಪಂದ್ಯದ ಎರಡನೇ ದಿನವಾದ ಶನಿವಾರ 140 ರನ್‌ಗಳನ್ನು ಮಾಡಿದ ಬಳಿಕ ತನ್ನ ಬೌಲಿಂಗ್‌ನಲ್ಲಿ ಔಟಾದ ಹೆಡ್‌ರಿಗೆ ಪೆವಿಲಿಯನ್‌ಗೆ ಹೋಗುವಂತೆ ಸಿರಾಜ್ ಸಂಜ್ಞೆ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು.
ಎರಡನೇ ದಿನದ ಆಟದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ, ಈ ವಿವಾದದ ಬಗ್ಗೆ ಹೆಡ್ ತನ್ನ ಅಭಿಪ್ರಾಯಗಳನ್ನು ಹೇಳಿದ್ದರು. ‘‘ಸಿರಾಜ್‌ರ ಆ ರೀತಿಯ ವರ್ತನೆ ಅನಗತ್ಯವಾಗಿತ್ತು. ನಾನು ಅವರ ಬೌಲಿಂಗನ್ನು ಪ್ರಶಂಸಿಸುತ್ತಿದ್ದೆ’’ ಎಂದು ಅವರು ಹೇಳಿದ್ದರು.
ರವಿವಾರ ಮೂರನೇ ದಿನದ ಆಟದ ಆರಂಭಕ್ಕೆ ಮುನ್ನ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿರುವ ಸಿರಾಜ್, ಹೆಡ್‌ರ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.
‘‘ಹೆಡ್‌ಗೆ ಬೌಲಿಂಗ್ ಮಾಡುವುದನ್ನು ನಾನು ಆನಂದಿಸುತ್ತಿದ್ದೆ. ಅದೊಂದು ಉತ್ತಮ ಸ್ಪರ್ಧೆಯಾಗಿತ್ತು. ಯಾಕೆಂದರೆ, ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಒಂದು ಒಳ್ಳೆಯ ಎಸೆತವನ್ನು ಓರ್ವ ಬ್ಯಾಟರ್ ಸಿಕ್ಸ್‌ಗೆ ಅಟ್ಟಿದಾಗ ಬೇಸರವಾಗುತ್ತದೆ. ಅದು ನನಗೆ ಶಕ್ತಿಯನ್ನು ತುಂಬುತ್ತದೆ. ಅವರನ್ನು ಬೌಲ್ಡ್ ಮಾಡಿದ ಬಳಿಕ ನಾನು ಸಂಭ್ರಮಿಸಿದೆ. ಆಗ ಅವರು ನನ್ನನ್ನು ನಿಂದಿಸಿದರು. ನೀವು ಅದನ್ನು ಟಿವಿಯಲ್ಲೂ ನೋಡಬಹುದು. ಆರಂಭದಲ್ಲಿ ಅದು ನನ್ನ ಸಂಭ್ರಮಾಚರಣೆಯಾಗಿತ್ತು. ನಾನು ಅವರಿಗೆ ಏನೂ ಹೇಳಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಅವರು ಸುಳ್ಳು ಹೇಳಿದ್ದಾರೆ. ನಾನು ಚೆನ್ನಾಗಿ ಬೌಲಿಂಗ್ ಮಾಡಿದ್ದೇನೆ ಎಂದು ಅವರು ಹೇಳಿಯೇ ಇಲ್ಲ. ನಾವು ಎಲ್ಲರನ್ನೂ ಗೌರವಿಸುತ್ತೇವೆ. ನಾನು ಎಲ್ಲರನ್ನೂ ಗೌರವಿಸುತ್ತೇನೆ. ಯಾಕೆಂದರೆ ಕ್ರಿಕೆಟ್ ಸಂಭಾವಿತರ ಆಟ. ಟ್ರಾವಿಸ್ ಹೆಡ್‌ರ ವರ್ತನೆ ತಪ್ಪು. ನನಗೆ ಅದರಿಂದ ಸಂತೋಷವಾಗಲಿಲ್ಲ’’ ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್‌ರೊಂದಿಗಿನ ಮಾತುಕತೆಯ ವೇಳೆ ಸಿರಾಜ್ ಹೇಳಿದ್ದಾರೆ.
INTERVIEW OF MOHAMMED SIRAJ...!!!!- Siraj confirms "Travis Head didn't say well bowled". pic.twitter.com/CXrRdDuLcX
— Johns. (@CricCrazyJohns) December 8, 2024