19 ವರ್ಷದೊಳಗಿನ ವನಿತೆಯರ ಟಿ-20 ವಿಶ್ವಕಪ್ | ಇಂಗ್ಲೆಂಡ್‌ಗೆ ಸೋಲುಣಿಸಿದ ಭಾರತ ಫೈನಲ್‌ಗೆ, ದಕ್ಷಿಣ ಆಫ್ರಿಕಾ ಎದುರಾಳಿ

Update: 2025-01-31 21:10 IST
Under-19 Womens T20 World Cup

PC : NDTV 

  • whatsapp icon

ಕೌಲಾಲಂಪುರ: ಜಿ.ಕಮಲಿನಿ ಅರ್ಧಶತಕ ಹಾಗೂ ಸ್ಪಿನ್ನರ್‌ಗಳ ಅಮೋಘ ಪ್ರದರ್ಶನದ ನೆರವಿನಿಂದ 19 ವರ್ಷದೊಳಗಿನ ವನಿತೆಯರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು 9 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಮಣಿಸಿರುವ ಭಾರತದ ಕ್ರಿಕೆಟ್ ತಂಡವು ಫೈನಲ್‌ಗೆ ಪ್ರವೇಶಿಸಿದೆ.

ಭಾರತ ತಂಡವು ರವಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಸವಾಲನ್ನು ಎದುರಿಸಲಿದೆ. ಮೊದಲ ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಇದೇ ಮೊದಲ ಬಾರಿ ಅಂಡರ್-19 ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದೆ.

ಶುಕ್ರವಾರ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಎಡಗೈ ಸ್ಪಿನ್ನರ್‌ಗಳಾದ ಪರುನಿಕಾ ಸಿಸೋಡಿಯಾ ಹಾಗೂ ವೈಷ್ಣವಿ ಶರ್ಮಾ ಅವರು ಇಂಗ್ಲೆಂಡ್ ತಂಡವನ್ನು 8 ವಿಕೆಟ್‌ಗಳ ನಷ್ಟಕ್ಕೆ 113 ರನ್‌ಗೆ ನಿಯಂತ್ರಿಸಿದರು. ಸಿಸೋಡಿಯಾ 21 ರನ್‌ಗೆ 3 ವಿಕೆಟ್‌ಗಳನ್ನು ಪಡೆದರೆ, ವೈಷ್ಣವಿ ಶರ್ಮಾ 23 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದರು.

15 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿದ ಭಾರತ ತಂಡವು ಯಶಸ್ವಿಯಾಗಿ ರನ್ ಚೇಸ್ ಮಾಡಿತು. ಓಪನರ್‌ಗಳಾದ ಜಿ.ತ್ರಿಶಾ(35 ರನ್, 29 ಎಸೆತ, 5 ಬೌಂಡರಿ) ಹಾಗೂ ಕಮಲಿನಿ(ಔಟಾಗದೆ 56 ರನ್, 50 ಎಸೆತ, 8 ಬೌಂಡರಿ)ರನ್ ಚೇಸ್‌ಗೆ ಬಲ ತುಂಬಿದರು.

ತ್ರಿಶಾ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದು, ಭಾರತ ತಂಡವು ಪವರ್‌ಪ್ಲೇ ವೇಳೆ ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಿತು. ತ್ರಿಶಾ ಎಡಗೈ ಸ್ಪಿನ್ನರ್ ಬ್ರೆಟ್‌ಗೆ ವಿಕೆಟ್ ಒಪ್ಪಿಸಿದ ನಂತರ ಕಮಲಿನಿ ಅವರು ಸಾನಿಕಾ ಚಾಲ್ಕೆ (11 ರನ್)2ನೇ ವಿಕೆಟ್‌ಗೆ 47 ರನ್ ಸೇರಿಸಿದರು.

ಇಂಗ್ಲೆಂಡ್ ತಂಡವು 5ನೇ ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿ ಉತ್ತಮ ಆರಂಭ ಪಡೆದಿತ್ತು. ಆದರೆ ಆ ನಂತರ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. ಡವಿನಾ ಪೆರಿನ್(45 ರನ್, 40 ಎಸೆತ, 6 ಬೌಂಡರಿ,2 ಸಿಕ್ಸರ್)ಹಾಗೂ ನೊಗ್ರೊವ್(30 ರನ್, 25 ಎಸೆತ, 3 ಬೌಂಡರಿ, 1 ಸಿಕ್ಸರ್)ಮೂರನೇ ವಿಕೆಟ್‌ಗೆ 44 ರನ್ ಜೊತೆಯಾಟ ನಡೆಸಿದರು. ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್ ಇನಿಂಗ್ಸ್ ಅಸ್ತವ್ಯಸ್ತವಾಗಿದ್ದು, ಕೊನೆಯ 10 ಓವರ್‌ಗಳಲ್ಲಿ ಕೇವಲ 40 ರನ್‌ಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಇಂಗ್ಲೆಂಡ್ 92 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಕೆಳ ಸರದಿಯ ಬ್ಯಾಟರ್‌ಗಳು ಕೊನೆಯ 4 ಓವರ್‌ಗಳಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸುವಲ್ಲಿ ಶಕ್ತರಾದರು.

*ಮೊದಲ ಬಾರಿ ದಕ್ಷಿಣ ಆಫ್ರಿಕಾ ಫೈನಲ್‌ಗೆ

ಇದೇ ವೇಳೆ ಶುಕ್ರವಾರ ನಡೆದ ಮತ್ತೊಂದು ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡವನ್ನು 5 ವಿಕೆಟ್‌ಗಳಿಂದ ಸದೆಬಡಿದ ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿ ವನಿತೆಯರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ ಸಾಧನೆ ಮಾಡಿದೆ.

ಗೆಲ್ಲಲು ಕೇವಲ 106 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡವು 11 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು. ಓಪನರ್ ಜೆಮ್ಮಾ ಬೊಥಾ(37 ರನ್, 24 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರೆ, ನಾಯಕಿ ಕಾಯ್ಲಾ ರೆನೆಕ್(26 ರನ್, 26 ಎಸೆತ)ಎಸೆತಕ್ಕೊಂದು ರನ್ ಗಳಿಸಿದರು.

ಎಡಗೈ ಸ್ಪಿನ್ನರ್ ಅಶ್ಲೆ ವಾನ್ ವಿಕ್(4-17)ಆಸ್ಟ್ರೇಲಿಯದ ಆಟಗಾರ್ತಿಯರನ್ನು ಇನ್ನಿಲ್ಲದಂತೆ ಕಾಡಿದರು. ಕೇವಲ ಮೂರು ಬ್ಯಾಟರ್‌ಗಳು ಎರಡಂಕೆಯ ಸ್ಕೋರ್ ಗಳಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯನ್ನರು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ ಕೇವಲ 105 ರನ್ ಗಳಿಸಲಷ್ಟೇ ಶಕ್ತರಾದರು. ಎಲ್ಲಾ ಬ್ರಿಸ್ಕೊ 17 ಎಸೆತಗಳಲ್ಲಿ 27 ರನ್ ಗಳಿಸಿ ಆಸ್ಟ್ರೇಲಿಯದ ಮೊತ್ತವನ್ನು 100ರ ಗಡಿ ದಾಟಿಸಿದರು.

ದಕ್ಷಿಣ ಆಫ್ರಿಕಾ ತಂಡವು 56 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದರೂ ರೆನೆಕ್ ಹಾಗೂ ಕರಾಬಾ ಮೆಸೊ 4ನೇ ವಿಕೆಟ್‌ಗೆ ಗಳಿಸಿದ 38 ರನ್ ಜೊತೆಯಾಟದ ನೆರವಿನಿಂದ ಚೇತರಿಸಿಕೊಂಡಿತು.

ಇತ್ತೀಚೆಗಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ ತಂಡವು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಸೀನಿಯರ್ ಮಹಿಳೆಯರು ಹಾಗೂ ಪುರುಷರ ತಂಡಗಳು ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದ್ದವು. ಟೆಂಬಾ ಬವುಮಾ ನೇತೃತ್ವದ ಟೆಸ್ಟ್ ತಂಡವು ಈ ವರ್ಷದ ಜೂನ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News