ಅಂಡರ್-19 ವಿಶ್ವಕಪ್ ಫೈನಲ್ ; ಆಸ್ಟ್ರೇಲಿಯವನ್ನು ಎದುರಿಸಲಿರುವ ಭಾರತಕ್ಕೆ ಆರನೇ ಪ್ರಶಸ್ತಿಯ ಕನಸು

Update: 2024-02-10 17:31 GMT

Photo : X \ @icc

ಬೆನೋನಿ(ದಕ್ಷಿಣ ಆಫ್ರಿಕಾ): ಭಾರತೀಯ ಅಂಡರ್-19 ಕ್ರಿಕೆಟ್ ತಂಡ ರವಿವಾರ ನಡೆಯಲಿರುವ ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡದ ಸವಾಲನ್ನ್ನು ಎದುರಿಸಲಿದೆ. ಟೂರ್ನಮೆಂಟ್‌ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಹಾಲಿ ಚಾಂಪಿಯನ್ ಭಾರತ ಆರನೇ ಬಾರಿ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸುವ ಕನಸು ಕಾಣುತ್ತಿದೆ.

ರವಿವಾರ ನಡೆಯುವ ಫೈನಲ್ ಕಾದಾಟದಲ್ಲಿ ಉಭಯ ತಂಡಗಳ ಯುವ ಆಟಗಾರರು ಇತಿಹಾಸದ ಪುಟದಲ್ಲಿ ತಮ್ಮ ಹೆಸರು ದಾಖಲಿಸಲು ಹಾತೊರೆಯುತ್ತಿದ್ದಾರೆ.

ಭಾರತದ ಹಿರಿಯರ ಕ್ರಿಕೆಟ್ ತಂಡ 2023ರ ನವೆಂಬರ್ 19ರಂದು ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತಿರುವ ಕಹಿ ನೆನಪು ಇನ್ನೂ ಮಾಸಿಲ್ಲ. ನಾವು ಸೇಡು ತೀರಿಸಿಕೊಳ್ಳುವ ಕುರಿತು ಚಿಂತಿಸುತ್ತಿಲ್ಲ. ನಾವು ಫೈನಲ್ ಪಂದ್ಯದತ್ತ ಮಾತ್ರ ಗಮನ ಹರಿಸಲಿದ್ದು, ಈ ಹಿಂದಿನ ನಿರಾಶೆಯನ್ನು ಇಲ್ಲವೇ ಭವಿಷ್ಯದ ಅನಿಶ್ಚಿತತೆಯ ಕುರಿತು ಯೋಚಿಸಲಾರೆವು ಎಂದು ಭಾರತದ ನಾಯಕ ಉದಯ್ ಸಹರಾನ್ ಹೇಳಿದ್ದಾರೆ.

ಪಂದ್ಯಾವಳಿಯಲ್ಲಿ ಅಜೇಯ ಗೆಲುವಿನ ದಾಖಲೆ ಹೊಂದಿರುವ ಭಾರತವು ಫೈನಲ್ ಪಂದ್ಯದಲ್ಲಿ ಒತ್ತಡವನ್ನೂ ಮೀರಿ ಆಡಿ ಬಲಿಷ್ಠ ಎದುರಾಳಿಯ ಎದುರು ಜಯಭೇರಿ ಬಾರಿಸುವ ವಿಶ್ವಾಸದಲ್ಲಿದೆ.

ಆಸ್ಟ್ರೇಲಿಯದ ತಂಡದಲ್ಲಿ ನಾಯಕ ಹ್ಯೂಬ್ ವೆಬ್‌ಜೆನ್, ಓಪನರ್ ಹ್ಯಾರಿ ಡಿಕ್ಸನ್ ಹಾಗೂ ವೇಗಿಗಳಾದ ಟಾಮ್ ಸ್ಟ್ರಾಕರ್ ಹಾಗೂ ಕಾಲುಮ್ ವಿಡ್ಲೆರ್ ಭಾರತಕ್ಕೆ ಆಕಾಂಕ್ಷೆಗಳಿಗೆ ತೀವ್ರ ಸವಾಲೊಡ್ಡಬಹುದು. ಸ್ಟಾಕರ್ ಪಾಕಿಸ್ತಾನ ವಿರುದ್ಧ ಸೆಮಿ ಫೈನಲ್‌ನಲ್ಲಿ ಆರು ವಿಕೆಟ್ ಗೊಂಚಲು ಪಡೆದಿದ್ದರು. ಟೂರ್ನಿಯಲ್ಲಿ 5 ಇನಿಂಗ್ಸ್‌ಗಳಲ್ಲಿ ಒಟ್ಟು 12 ವಿಕೆಟ್ ಪಡೆದಿದ್ದಾರೆ.

2012 ಹಾಗೂ 2018ರ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಸೋಲಿಸಿರುವ ಭಾರತವು ಈ ಬಾರಿ ಫೈನಲ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿದೆ.

ವಯೋಮಿತಿ ಕ್ರಿಕೆಟ್‌ನಲ್ಲಿ ಭಾರತೀಯ ತಂಡದ ಸತತ ಯಶಸ್ಸು ದೇಶದಲ್ಲಿರುವ ಅಪಾರ ಪ್ರತಿಭೆಗಳು, ವ್ಯವಸ್ಥೆಯ ಪರಿಣಾಮಕಾರಿ ಬೆಳವಣಿಗೆಯನ್ನು ಬಿಂಬಿಸುತ್ತದೆ.

2016ರ ನಂತರ 9ನೇ ಬಾರಿ ಫೈನಲ್‌ನಲ್ಲಿ ಕಾಣಿಸಿಕೊಂಡಿರುವ ಭಾರತದ ಯುವ ಕ್ರಿಕೆಟಿಗರು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದಾರೆ. 2000ರಲ್ಲಿ ಭಾರತವು ಮೊದಲ ಬಾರಿ ಮುಹಮ್ಮದ್ ಕೈಫ್ ನಾಯಕತ್ವದಲ್ಲಿ ಅಂಡರ್-19 ವಿಶ್ವಕಪ್ ಜಯಿಸಿತ್ತು. ಆ ನಂತರ 2008ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟ್ರೋಫಿ ಗೆದ್ದಾಗ ಸಾಕಷ್ಟು ಸುದ್ದಿ ಮಾಡಿತ್ತು. 2012, 2018 ಹಾಗೂ 2022ರಲ್ಲಿ ಟ್ರೋಫಿ ಎತ್ತಿ ಹಿಡಿದಿದೆ. 2016 ಹಾಗೂ 2020ರಲ್ಲಿ ಫೈನಲ್‌ನಲ್ಲಿ ಸೋತಿದೆ.

ಆಸ್ಟ್ರೇಲಿಯವು ಆರನೇ ಬಾರಿ ಫೈನಲ್‌ನಲ್ಲಿ ಆಡಲು ಸಜ್ಜಾಗುತ್ತಿದ್ದು, ಈ ಹಿಂದೆ ಮೂರು ಬಾರಿ ಚಾಂಪಿಯನ್ ಆಗಿದೆ.

ಅಂಡರ್-19 ವಿಶ್ವಕಪ್ ಟೂರ್ನಿಯ ಮೂಲಕ ಯುವರಾಜ್ ಸಿಂಗ್, ಮುಹಮ್ಮದ್ ಕೈಫ್, ಸುರೇಶ್ ರೈನಾ, ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜ, ಕೆ.ಎಲ್. ರಾಹುಲ್, ರಿಷಭ್ ಪಂತ್, ಶುಭಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್‌ರಂತಹ ಹಲವು ಸ್ಟಾರ್ ಆಟಗಾರರು ಬೆಳಕಿಗೆ ಬಂದಿದ್ದಾರೆ.

ಜೂನಿಯರ್ ಕ್ರಿಕೆಟಿಗರು ಸೀನಿಯರ್ ಕ್ರಿಕೆಟ್ ಆಗಿ ಪರಿವರ್ತನೆ ಆಗಲು ತನ್ನದೇ ಆದ ಸವಾಲುಗಳಿದ್ದು, ಹಲವು ಪ್ರತಿಭಾವಂತ ಆಟಗಾರರು ಪ್ರಮುಖ ಹಂತದಲ್ಲಿ ವಿಫಲರಾಗಿದ್ದರು. 2000ರ ಆರಂಭದಲ್ಲಿ ರೀತಿಂದರ್ ಸಿಂಗ್ ಸೋಧಿ ಹಾಗೂ ಗೌರವ್ ಧಿಮಾನ್, ಉನ್ಮುಕ್ತ್ ಚಂದ್, ಹರ್ಮೀತ್ ಸಿಂಗ್, ವಿಜಯ್ ರೆಲ್, ಸಂದೀಪ್ ಶರ್ಮಾ, ಅಜಿತೇಶ್ ಅರ್ಗಲ್, ಕಮಲ್ ಪಾಸ್ಸಿ, ಸಿದ್ದಾರ್ಥ್ ಕೌಲ್, ಸ್ಮಿತ್ ಪಟೇಲ್, ರವಿಕಾಂತ್ ಸಿಂಗ್ ಹಾಗೂ ಕಮಲೇಶ್ ನಾಗರಕೋಟಿ, ಇಕ್ಬಾಲ್ ಅಬ್ದುಲ್ಲಾ ಗಟ್ಟಿಯಾಗಿ ನೆಲೆವೂರುವಲ್ಲಿ ವಿಫಲರಾಗಿದ್ದರು.

ಫೈನಲ್ ಪಂದ್ಯದ ಕುರಿತು ಭಾರೀ ಕುತೂಹಲ ಮನೆ ಮಾಡಿದ್ದು, ಸ್ವತಃ ನಾಯಕ ಉದಯ್, ಸಚಿನ್ ಧಾಸ್ ಹಾಗೂ ಸೌಮಿ ಪಾಂಡೆ ಅವರಂತಹ ಆಟಗಾರರು ಅಮೋಘ ಪ್ರದರ್ಶನದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಉದಯ್ ನೇತೃತ್ವದ ಭಾರತ ತಂಡ ಕೆಲವೇ ತಿಂಗಳ ಹಿಂದೆ ನಡೆದಿದ್ದ ಅಂಡರ್-19 ಏಶ್ಯಕಪ್‌ನಲ್ಲಿ ಫೈನಲ್ ತಲುಪುವಲ್ಲಿ ವಿಫಲವಾಗಿತ್ತು. ಹೀಗಾಗಿ ಈ ವಿಶ್ವಕಪ್‌ನಲ್ಲಿ ಈ ತಂಡದ ಮೇಲೆ ಹೆಚ್ಚು ನಿರೀಕ್ಷೆ ಇರಲಿಲ್ಲ.

ಉದಯ್ ಹಾಗೂ ಧಾಸ್ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದರೆ, ಪಾಂಡೆ ಸ್ಪಿನ್ ಬೌಲಿಂಗ್‌ನ ಮೂಲಕ ಎಲ್ಲರ ಚಿತ್ತ ತಮ್ಮತ್ತ ಸೆಳೆಯುತ್ತಿದ್ದಾರೆ. ತಂಡದ ಸಂಘಟಿತ ಪ್ರಯತ್ನ ಹಾಗೂ ಪ್ರತಿರೋಧಿಸುವ ಪ್ರವೃತ್ತಿಯು ಫೈನಲ್ ತಲುಪಲು ನೆರವಾಗಿದೆ. ಉದಯ್ 1 ಶತಕ ಹಾಗೂ 3 ಅರ್ಧಶತಕಗಳ ಸಹಿತ ಒಟ್ಟು 389 ರನ್ ಗಳಿಸಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಎಡಗೈ ಸ್ಪಿನ್ನರ್ ಸೌಮಿ ಪಾಂಡೆ ಟೂರ್ನಿಯಲ್ಲಿ ಒಟ್ಟು 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ರವೀಂದ್ರ ಜಡೇಜ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿರುವ ಪಾಂಡೆ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ 3ನೇ ಬೌಲರ್ ಆಗಿದ್ದಾರೆ. ಮಹಾರಾಷ್ಟ್ರದ ಯುವ ಬ್ಯಾಟರ್ ಸಚಿನ್ ಫಿನಿಶರ್ ಪಾತ್ರ ನಿರ್ವಹಿಸುತ್ತಿದ್ದಾರೆ.

ಸರ್ಫರಾಝ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ಟೂರ್ನಿಯಲ್ಲಿ ಎರಡನೇ ಗರಿಷ್ಠ ರನ್ ಸ್ಕೋರರ್(6 ಇನಿಂಗ್ಸ್‌ಗಳಲ್ಲಿ 2 ಶತಕ ಸಹಿತ 338 ರನ್) ಆಗಿದ್ದು, ಎಡಗೈ ಸ್ಪಿನ್ ಬೌಲಿಂಗ್‌ನಲ್ಲೂ ಮಿಂಚುತ್ತಿದ್ದಾರೆ. ಬಲಗೈ ವೇಗಿ ರಾಜ್ ಲಿಂಬಾನಿ ಹಾಗೂ ಎಡಗೈ ವೇಗಿ ನಮನ್ ತಿವಾರಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.

ತಂಡಗಳು

ಭಾರತ: ಉದಯ್ ಸಹರಾನ್(ನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ಧಾಸ್, ಪ್ರಿಯಾಂಶು ಮೊಲಿಯ, ಮುಶೀರ್ ಖಾನ್, ಅವಿನಾಶ್ ರಾವ್(ವಿಕೆಟ್‌ಕೀಪರ್),ಸೌಮಿ ಕುಮಾರ್ ಪಾಂಡೆ(ಉಪ ನಾಯಕ), ಮುರುಗನ್ ಅಭಿಷೇಕ್, ಇನ್ನೆಶ್ ಮಹಾಜನ್(ವಿಕೆಟ್‌ಕೀಪರ್), ಧನುಶ್ ಗೌಡ, ಅರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.

ಆಸ್ಟ್ರೇಲಿಯ: ಹ್ಯೂ ವೆಬ್‌ಗೆನ್(ನಾಯಕ), ಲಾಚ್ಲಾನ್ ಐಟ್ಕೆನ್, ಚಾರ್ಲಿ ಆ್ಯಂಡರ್ಸನ್, ಹರ್ಕಿರತ್ ಬಾಜ್ವಾ, ಮಹ್ಲಿ ಬಿಯರ್ಡ್‌ಮನ್, ಟಾಮ್ ಕ್ಯಾಂಪ್‌ಬೆಲ್, ಹ್ಯಾರಿ ಡಿಕ್ಸನ್, ರಿಯಾನ್ ಹಿಕ್ಸ್(ವಿಕೆಟ್‌ಕೀಪರ್), ಸ್ಯಾಮ್ ಕಾನ್‌ಸ್ಟಾಸ್, ರಾಫೆಲ್ ಮ್ಯಾಕ್‌ಮಿಲನ್, ಏಡನ್ ಓ ಕಾನರ್, ಹರ್ಜಾಸ್ ಸಿಂಗ್, ಟಾಮ್ ಸ್ಟ್ರಾಕರ್, ಕ್ಯಾಲಮ್ ವಿಡ್ಲರ್, ಒಲ್ಲಿ ಪೀಕ್.

ಪಂದ್ಯ ಆರಂಭದ ಸಮಯ: ಮಧ್ಯಾಹ್ನ 1:30

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News