ಯುಎಸ್ ಓಪನ್: ದಾಖಲೆಯ 24ನೇ ಗ್ರ್ಯಾನ್ ಸ್ಲಾಮ್ ಗೆದ್ದ ಜೊಕೊವಿಕ್
ನ್ಯೂಯಾರ್ಕ್: ತಮ್ಮೆಲ್ಲ ಅನುಭವ, ಶಕ್ತಿಯನ್ನು ಒಗ್ಗೂಡಿಸಿ, ಆಕರ್ಷಕ ಸರ್ವ್ ಅಂಡ್ ವಾಲಿಗಳ ಸಹಿತ ಅಮೋಘ ಆಟ ಪ್ರದರ್ಶಿಸಿದ ನೊವಾಕ್ ಜೊಕೊವಿಕ್, ಡೇನಿಯಲ್ ಮೆಡ್ವೆಡೇವ್ ಅವರ ಸವಾಲನ್ನು 6-3, 7-6 (5), 6-3 ರಿಂದ ಬದಿಗೊತ್ತಿ ಯುಎಸ್ ಓಪನ್ ಟೆನಿಸ್ ಪ್ರಶಸ್ತಿ ಗೆದ್ದರು. ಈ ಮೂಲಕ ತಮ್ಮ ವೃತ್ತಿಜೀವನದಲ್ಲಿ 24ನೇ ಗ್ರ್ಯಾನ್ ಸ್ಲಾಮ್ ಗೆದ್ದ ದಾಖಲೆಗೆ ಭಾಜನರಾದರು.
36 ವರ್ಷದ ಸೆರ್ಬಿಯಾ ಆಟಗಾರ ನೇರ ಸೆಟ್ ಗಳ ಜಯ ಸಾಧಿಸಿದರೂ, ಇಡೀ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು. ಇದಕ್ಕೂ ಮುನ್ನ ಸೆರೆನಾ ವಿಲಿಯಮ್ಸ್ ಮಾತ್ರ 1968ರಿಂದ ಆರಂಭವಾದ ಮುಕ್ತ ಟೆನಿಸ್ ಯುಗದಲ್ಲಿ 24 ಗ್ರ್ಯಾನ್ ಸ್ಲಾಮ್ ಸಾಧನೆ ಮಾಡಿದ್ದರು. ಮಾರ್ಗರೆಟ್ ಕೋರ್ಟ್ ಕೂಡಾ 24 ಪ್ರಶಸ್ತಿಗಳನ್ನು ಗೆದ್ದಿದ್ದರೂ, ಈ ಪೈಕಿ 13 ಪ್ರಶಸ್ತಿಗಳು, ಗ್ರ್ಯಾನ್ ಸ್ಲಾಮ್ ಸ್ಪರ್ಧೆಗೆ ವೃತ್ತಿಪರರು ಪ್ರವೇಶಿಸುವ ಮುನ್ನ ಗಳಿಸಿದ ಪ್ರಶಸ್ತಿಗಳಾಗಿದ್ದವು.
ಒಂದು ಗಂಟೆ 44 ನಿಮಿಷಗಳ ಎರಡನೇ ಸೆಟ್ ಇಬ್ಬರು ಆಟಗಾರರ ನಡುವಿನ ವೃತ್ತಿಪರ ಕೌಶಲಗಳಿಗೆ ಸವಾಲಾಗಿತ್ತು. ಅಂತಿಮವಾಗಿ ಜೋಕೊವಿಕ್ ಗೆಲುವಿನ ನಗೆ ಬೀರಿದರು. ಕೆಲವೊಂದು ಮಹತ್ವದ ಅಂಕಗಳನ್ನು ಸಂಪಾದಿಸಿದ ಬಳಿಕ ಬಳಲಿದ ಜೊಕೊವಿಕ್ ವಿಶ್ರಾಂತಿ ಪಡೆದರು
2021ರ ಫೈನಲ್ ನಲ್ಲಿ ಜೊಕೊವಿಕ್ ವಿರುದ್ಧ ಗೆಲುವು ಸಾಧಿಸಿದ್ದ ಮೆಡ್ವೆಡೇವ್, ಅರ್ಧ ಶತಮಾನದ ಬಳಿಕ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಎಲ್ಲ ಗ್ರ್ಯಾನ್ ಸ್ಲಾಮ್ ಗೆಲ್ಲುವ ಕನಸನ್ನು ನುಚ್ಚುನೂರುಗೊಳಿಸಿದ್ದರು. ಆದರೆ ಭಾನುವಾರ ರಾತ್ರಿ ನಡೆದ ಫೈನಲ್ ಗೆಲ್ಲುವ ಮೂಲಕ ಯುಎಸ್ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎನಿಸಿದರು.
ಸೋಲಿನ ಹೊರತಾಗಿಯೂ ಟ್ರೋಫಿ ಪ್ರದಾನ ಸಮಾರಂಭದಲ್ಲಿ ಜೋಕ್ ಸಿಡಿಸಿದ ಮೆಡ್ವೆಡೇವ್, "ಮೊಟ್ಟಮೊದಲನೆಯದಾಗಿ, ನೊವಾಕ್ ನೀವು ಇನ್ನೂ ಇಲ್ಲಿ ಏನು ಮಾಡುತ್ತಿರುವಿರಿ ಎಂದು ಕೇಳಬಯಸುತ್ತೇನೆ" ಎಂದರು.
ಇದು ಜೊಕೊವಿಕ್ ಗೆ ನಾಲ್ಕನೇ ಯುಎಸ್ ಓಪನ್ ಕಿರೀಟವಾಗಿದೆ. 10 ಆಸ್ಟ್ರೇಲಿಯನ್ ಓಪನ್, ಏಳು ವಿಂಬಲ್ಡನ್, ಮೂರು ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಪುರುಷರ ಸ್ಲಾಮ್ ಪಟ್ಟಿಯಲ್ಲಿ ಮುನ್ನಡೆ ಹಿಗ್ಗಿಸಿಕೊಂಡರು. ಗಾಯದ ಸಮಸ್ಯೆಯಿಂದ ಹೊರಗುಳಿದಿರುವ ರಫೇಲ್ ನಡಾಲ್ 22 ಪ್ರಶಸ್ತಿ ಗೆದ್ದಿದ್ದರೆ, ನಿವೃತ್ತಿ ಘೋಷಿಸಿರುವ ಫೆಡರರ್ 20 ಪ್ರಶಸ್ತಿಗೆ ಭಾಜನರಾಗಿದ್ದಾರೆ.