ವಿನೇಶ್ ಫೋಗಟ್ ರಾಜಕೀಯ ಪ್ರವೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಹಾವೀರ್ ಫೋಗಟ್
ಹೊಸದಿಲ್ಲಿ: ವಿನೇಶ್ ರಾಜಕೀಯಕ್ಕೆ ಪ್ರವೇಶಿಸಿದ ನಂತರ ನನ್ನ ಪುತ್ರಿ ಸಂಗೀತಾ ಫೋಗಟ್ ಈಗ ನನ್ನ ಕನಸನ್ನು ಈಡೇರಿಸಲಿದ್ದು, ಆಕೆಯನ್ನು ನಾನು ಈಗಾಗಲೇ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಸಜ್ಜುಗೊಳಿಸಲು ಆರಂಭಿಸಿದ್ದೇನೆ ಎಂದು ವಿನೇಶ್ ಫೋಗಟ್ ಅವರ ದೊಡ್ಡಪ್ಪ ಹಾಗೂ ಮಾಜಿ ಕುಸ್ತಿ ತರಬೇತುದಾರ ಮಹಾವೀರ್ ಸಿಂಗ್ ಫೋಗಟ್ ಹೇಳಿದ್ದಾರೆ.
ಸಂಗೀತಾ ಅವರ ಪತಿ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಹಾಗೂ ಮಾಜಿ ಕುಸ್ತಿಪಟು ವಿನೇಶ್ ಅವರು ಕಳೆದ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ವಿನೇಶ್ ಅವರು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಜಿಂದ್ ಜಿಲ್ಲೆಯ ಜುಲಾನಾದಿಂದ ಸ್ಪರ್ಧಿಸಲಿದ್ದಾರೆ.
ವಿನೇಶ್ ಅವರು ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಆಡಬೇಕಿತ್ತು. ಆದರೆ ಈಗ ಅವರು ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ನಾವು ಸಂಗೀತಾ ಫೋಗಟ್‌ರನ್ನು 2028ರ ಒಲಿಂಪಿಕ್ ಗೇಮ್ಸ್‌ಗೆ ಸಿದ್ಧಪಡಿಸಲು ಆರಂಭಿಸಿದ್ದೇವೆ. ಸಂಗೀತಾ ಭಾರತಕ್ಕೆ ಪದಕವನ್ನು ತರಬಹುದು. ಜಂತರ್‌ಮಂತರ್‌ನಲ್ಲಿ ನಡೆದ ಪ್ರತಿಭಟನೆಯಿಂದಾಗಿ ಸಂಗೀತಾ ನ್ಯಾಶನಲ್ಸ್ ಅನ್ನು ತಪ್ಪಿಸಿಕೊಂಡಿದ್ದರು. ಬಬಿತಾ ಫೋಗಟ್ ಅವರ ಮೊಣಕಾಲು ನೋವು ಗುಣಮುಖವಾಗಿಲ್ಲ. ಹೀಗಾಗಿ ಆಕೆ ಕುಸ್ತಿಗೆ ಮರಳುವುದರಲ್ಲಿ ಅರ್ಥವಿಲ್ಲ ಎಂದು ಮಹಾವೀರ್ ಫೋಗಟ್ ಹೇಳಿದ್ದಾರೆ.
ವಿನೇಶ್ 2028ರ ಒಲಿಂಪಿಕ್ಸ್‌ನಲ್ಲಿ ಸ್ವತಃ ತಯಾರಿ ನಡೆಸಿಕೊಳ್ಳಬೇಕೆಂದು ನಾನು ಬಯಸಿದ್ದೆ. ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವು ವಿನೇಶ್ ಹಾಗೂ ಆಕೆಯ ಪತಿಗೆ(ಸೋಮ್‌ವೀರ್)ಬಿಟ್ಟ ವಿಚಾರ. ವಿನೇಶ್ ರಾಜಕೀಯಕ್ಕೆ ಪ್ರವೇಶಿಸುವುದು ನಮಗೆ ಇಷ್ಟವಿರಲಿಲ್ಲ. ರಾಜಕೀಯಕ್ಕೆ ಪ್ರವೇಶಿಸುವ ಆಕೆಯ ನಿರ್ಧಾರದಿಂದ ನಾನು ಸಂತೋಷಗೊಂಡಿಲ್ಲ. ವಿನೇಶ್ 2028ರಲ್ಲಿ ಚಿನ್ನ ತಂದುಕೊಡುತ್ತಾರೆ ಎಂದು ಇಡೀ ದೇಶವೇ ನಿರೀಕ್ಷಿಸಿತ್ತು. ನನಗೂ ಆ ವಿಶ್ವಾಸ ಇತ್ತು ಎಂದು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಮಹಾವೀರ್ ಹೇಳಿದ್ದಾರೆ.
ವಿನೇಶ್ ಅವರು ಶಾಸಕಿಯಾಗಬಹುದು ಹಾಗೂ ಮಂತ್ರಿಯಾಗಬಹುದು. ಆದರೆ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರೆ ಅದು ಜೀವಮಾನವಿಡೀ ನೆನಪಿನಲ್ಲಿ ಉಳಿಯುತ್ತಿತ್ತು ಎಂದು ಮಹಾವೀರ್ ಫೋಗಟ್ ಹೇಳಿದ್ದಾರೆ.
100 ಗ್ರಾಂ ಹೆಚ್ಚು ತೂಕ ಇದ್ದಾರೆಂಬ ಕಾರಣಕ್ಕೆ ಪ್ಯಾರಿಸ್‌ನಲ್ಲಿ ನಡೆದಿದ್ದ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಸ್ಪರ್ಧಾವಳಿಯ ಫೈನಲ್‌ನಲ್ಲಿ ಆಡುವುದರಿಂದ ವಿನೇಶ್‌ರನ್ನು ಅನರ್ಹಗೊಳಿಸಲಾಗಿತ್ತು. ಇದರ ಪರಿಣಾಮವಾಗಿ ವಿನೇಶ್ ಚಿನ್ನದ ಪದಕ ಗೆಲ್ಲುವಲ್ಲಿ ಅಶಕ್ತರಾದರು.
ಗೀತಾ, ಬಬಿತಾ, ರೀತು ಹಾಗೂ ಸಂಗೀತಾ ಅವರು ಮಹಾವೀರ್ ಅವರ ನಾಲ್ವರು ಪುತ್ರಿಯರು. ಪ್ರಿಯಾಂಕಾ ಹಾಗೂ ವಿನೇಶ್ ಫೋಗಟ್, ಮಹಾವೀರ್ ಅವರ ಕಿರಿಯ ಸಹೋದರ ರಾಜ್‌ಪಾಲ್ ಅವರ ಪುತ್ರಿಯರು. ರಾಜ್‌ಪಾಲ್ ತನ್ನ ಪುತ್ರಿಯರು ಚಿಕ್ಕಿವರಿದ್ದಾಗಲೇ ತೀರಿಕೊಂಡಿದ್ದರು. ಆಗ ಮಹಾವೀರ್ ಇವರನ್ನು ಭಿವಾನಿ ಜಿಲ್ಲೆಯ ಬಲಾಲಿಯಲ್ಲಿ ಕುಸ್ತಿಯಲ್ಲಿ ಪಳಗಿಸಿದರು. ಮೂವರು ಫೋಗಟ್ ಸಹೋದರಿಯರಾದ ಗೀತಾ, ಬಬಿತಾ ಹಾಗೂ ವಿನೇಶ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವಿವಿಧ ತೂಕ ವಿಭಾಗಗಳಲ್ಲಿ ಚಿನ್ನದ ಪದಕ ಜಯಿಸಿದ್ದರು. ಪ್ರಿಯಾಂಕಾ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ರಿತು ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಹಾಗೂ ಸಂಗೀತಾ ವಯೋಮಿತಿಯ ಅಂತರ್‌ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದಾರೆ.